ದೇಶಾದ್ಯಂತ ನಕಲಿ ನೋಟುಗಳ ಜಾಲ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಆತಂಕವ್ಯಕ್ತಪಡಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆ ನಿಟ್ಟಿನಲ್ಲಿ ನಕಲಿ ನೋಟುಗಳ ಪತ್ತೆ ಹಾಗೂ ನಕಲಿ ನೋಟು ಜಾಲದ ವಿರುದ್ದ ಹೋರಾಟ ನಡೆಸಲು ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದೆ.ದೇಶದಲ್ಲಿ 2007-08ನೇ ಸಾಲಿನಲ್ಲಿ ಸುಮಾರು 5.5ಕೋಟಿ ರೂಪಾಯಿಯಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ಅಂಕಿ-ಅಂಶ ತಿಳಿಸಿದೆ. ಈ ಹಿಂದಿನ ವರ್ಷಕ್ಕಿಂತ ಶೇ.24ರಷ್ಟು ನಕಲಿ ನೋಟು ಮಾರಾಟ ಹೆಚ್ಚಳಗೊಂಡಿರುವುದು ಅಂಕಿ-ಅಂಶದಿಂದ ಸಾಬೀತಾಗಿದೆ.ಪ್ರಸಕ್ತ ಸಾಲಿನಲ್ಲಿ ಅಂದಾಜು 5ಲಕ್ಷ ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದಾಗಿ ದೆಹಲಿ ಪೊಲೀಸ್ ಮೂಲಗಳು ತಿಳಿಸಿದೆ. ನಕಲಿ ನೋಟುಗಳ ಚಲಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರ್‌ಬಿಐ ಕಳೆದ ವರ್ಷ ಇಂಗ್ಲಿಷ್, ಹಿಂದಿ ಸೇರಿದಂತೆ 11ಭಾಷೆಗಳಲ್ಲಿ ಶಾಲೆಗಳಲ್ಲಿ ಪ್ರಚಾರ ಕಾರ್ಯಕ್ಕೆ ಮುಂದಾಗಿತ್ತು. ಆರ್‌ಬಿಐ ಮುದ್ರಿತ ನೋಟು ಹಾಗೂ ನಕಲಿ ನೋಟುಗಳ ನಡುವಿನ ವ್ಯತ್ಯಾಸಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಆರ್‌ಬಿಐ ಮಹತ್ವದ ಪಾತ್ರ ವಹಿಸುತ್ತಿರುವುದಾಗಿ ಟೈಮ್ಸ್ ಆಫ್ ಇಂಡಿಯಾದ ವರದಿ ತಿಳಿಸಿದೆ. ಈ ಕಾರ್ಯಕ್ರಮವನ್ನು ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿಯೂ ನಡೆಸುವುದಾಗಿ ಆರ್‌ಬಿಐ ರಿಜನಲ್ ಡೈರೆಕ್ಟರ್ ಆರ್.ಗಾಂಧಿ ವಿವರಿಸಿದ್ದಾರೆ. |