ಕಳಂಕಿತ ಸತ್ಯಂ ಕಂಪ್ಯೂಟರ್ ಸರ್ವೀಸಸ್‌ನ ಮಾರುಕಟ್ಟೆ ಬೆಲೆ ಸುಮಾರು ನಾಲ್ಕು ಸಾವಿರ ಕೋಟಿ ರುಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಸಂಸ್ಥೆಯ ಭೂಮಿ ಸೇರಿದಂತೆ ಸ್ಥಿರಾಸ್ತಿ ಬೆಲೆ ಸುಮಾರು ಐದು ಸಾವಿರ ಕೋಟಿ ಮೌಲ್ಯವಾದರೆ, ಇದರಲ್ಲಿ 2,500 ಕೋಟಿ ರುಪಾಯಿಗಳಷ್ಟು ಹೈದರಾಬಾದ್‌ನಲ್ಲಿರುವ ಪ್ರಮುಖ ಸತ್ಯಂ ಆಸ್ತಿಯೇ ಬೆಲೆಬಾಳುತ್ತದೆ ಎಂದು ಅಂದಾಜು ಮಾಡಲಾಗಿದೆ.ಸಂಸ್ಥೆಯ ಪ್ರಸಕ್ತ ಆಸ್ತಿ ಹಾಗೂ ಸಾಲವನ್ನು ಸುಮಾರು 700, 800 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಆಸ್ತಿಯಲ್ಲಿ ಸತ್ಯಂಗೆ ಬರಬೇಕಾದ ಹಣ ಒಳಗೊಂಡಿದ್ದು, ಸಾಲದಲ್ಲಿ ಮಾರಾಟಗಾರರಿಗೆ ಸಲ್ಲಿವ ಹಣ ಹಾಗೂ ವೇತನವೂ ಸೇರಿವೆ. ಇದನ್ನು ಹೊರತುಪಡಿಸಿ, ಸತ್ಯಂನ ದೀರ್ಘಾವಧಿ ಸಾಲ ಸುಮಾರು ಒಂದು ಸಾವಿರ ಕೋಟಿ ರುಪಾಯಿಗಳಾಗಿದೆ. ಇವೆಲ್ಲವನ್ನೂ ಗಮನಿಸಿ ಸತ್ಯಂನ ಮಾರುಕಟ್ಟೆ ಬೆಲೆ ಸುಮಾರು 3,500 ಕೋಟಿ ರುಪಾಯಿಗಳಿಂದ ನಾಲ್ಕು ಸಾವಿರ ಕೋಟಿ ಎಂದು ಲೆಕ್ಕಾಚಾರ ಹಾಕಲಾಗಿದೆ.ಸತ್ಯಂನ ಸ್ಥಾಪಕ ಬಿ.ರಾಮಲಿಂಗರಾಜು ಜನವರಿ ತಿಂಗಳಲ್ಲಿ ನಡೆಸಿದ ದೇಶದಲ್ಲೇ ಅತಿ ದೊಡ್ಡದೆಂದು ಹೇಳಲಾದ ಏಳು ಸಾವಿರ ಕೋಟಿ ರುಪಾಯಿಗಳ ಪಂಗನಾಮದ ನಂತರ ಇದೀಗ ಉದ್ಯಮ ವಲಯದ ಹಲವರು ತಮ್ಮತಮ್ಮಲ್ಲೇ ಸತ್ಯಂನ ಮಾರುಕಟ್ಟೆ ಬೆಲೆಯನ್ನು ಅಂದಾಜು ಮಾಡುತ್ತಿದ್ದಾರೆ. ಆದರೆ, ಸತ್ಯಂನ ಸದ್ಯದ ಸಾಲ ಹಾಗೂ ಆಸ್ತಿ ವಿವರಗಳು ಈ ಆಸ್ತಿ ವಿವರಗಳಿಗಿಂತ ಹೆಚ್ಚುಕಡಿಮೆಯಾಗಿರುವ ಸಾಧ್ಯತೆಗಳಿರುವುದರಿಂದ ಇದನ್ನು ಪಕ್ಕಾ ಮಾರುಕಟ್ಟೆ ಬೆಲೆಯಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಅಷ್ಟು ನಿಖರವಾಗಿ ಮಾರುಕಟ್ಟೆ ಬೆಲೆಯನ್ನು ಅಳೆಯುವುದು ಸವಾಲಿನ ಕೆಲಸ ಎಂದು ಮೂಲಗಳು ಹೇಳಿವೆ. |