ಜಾಗತಿಕವಾಗಿ ದುರ್ಬಲವಾದ ಆರ್ಥಿಕ ಸ್ಥಿತಿ ಮಂಗಳವಾರ ಭಾರತದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆ ಕುಸಿತ ಕಾಣುವುದರೊಂದಿಗೆ ಗಗನಕ್ಕೇರುತ್ತಿದ್ದ ಚಿನ್ನ ಬೆಲೆಯಲ್ಲಿ ಇಳಿಕೆ ಕಂಡಿದೆ.
ಒಂದೇ ಸಮನೆ ಬೆಲೆ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಸೋಮವಾರದ ಮಾರುಕಟ್ಟೆಯಲ್ಲಿ 10ಗ್ರಾ.ಗೆ 15,665ರೂಗಳಾಗಿತ್ತು. ಆದರೆ ಮಂಗಳವಾರದಂದು ಚಿನ್ನದ ಬೆಲೆಯಲ್ಲಿ 430ರೂ.ಗಳಷ್ಟು ಕಡಿಮೆಯಾಗುವ ಮೂಲಕ 10ಗ್ರಾಮ್‌ಗೆ 15,200ರೂ.ಗಳಾಗಿದೆ.
ಕಳೆದ 11ತಿಂಗಳಲ್ಲಿ ಡಾಲರ್ ಬೆಲೆ ಏರುತ್ತಿರುವಂತೆಯೇ ಫೆಬ್ರುವರಿ 20ರ ಸುಮಾರಿಗೆ 10ಗ್ರಾಂ ಚಿನ್ನಕ್ಕೆ 15,750ರೂ.ಗಳಷ್ಟು ಏರಿಕೆ ಕಾಣುವ ಮೂಲಕ ಬೆಲೆಯಲ್ಲಿ ಐತಿಹಾಸಿಕ ಏರಿಕೆ ಕಂಡಿತ್ತು.
ಡಾಲರ್ ಎದುರು ಭಾರತದ ರೂಪಾಯಿ ಮತ್ತಷ್ಟು ಕುಸಿತ ಕಾಣುವುದರೊಂದಿಗೆ ಚಿನ್ನದ ಬೆಲೆಯಲ್ಲಿಯೂ ಇಳಿಕೆ ಕಾಣುವ ಮೂಲಕ ಇದು 15ಸಾವಿರಕ್ಕಿಂತಲೂ ಕೆಳಕ್ಕೆ ಹೋಗುವ ಸಾಧ್ಯತೆ ಇರುವುದಾಗಿಯೂ ಆಲ್ ಇಂಡಿಯಾ ಸಾರ್ಫಾ ಮಾರ್ಕೆಟ್ ಅಧ್ಯಕ್ಷ ಶೀಲ್ ಚಾಂದ್ ಜೈನ್ ತಿಳಿಸಿದ್ದಾರೆ. |