ವಿಶ್ವದ ನಾಲ್ಕು ಅತಿ ದೊಡ್ಡ ವಾಹನ ಪ್ರದರ್ಶನಗಳಲ್ಲಿ ಒಂದಾದ 'ಜಿನಿವಾ ಆಟೋ ಶೋ'ನಲ್ಲಿ ಎಲ್ಲರ ಕುತೂಹಲದ ಕೇಂದ್ರಬಿಂದು ಭಾರತದ ಟಾಟಾ ಸಂಸ್ಥೆಯ ನ್ಯಾನೋ ಕಾರು!ಈ ಕುತೂಹಲ ಎಷ್ಟಿತ್ತೆದಂರೆ, ನ್ಯಾನೋ ಪ್ರದರ್ಶನಗೊಳ್ಳುತ್ತಲೇ ಸುತ್ತುವರಿದ ಉದ್ಯಮಪತಿಗಳು, ಮಾಧ್ಯಮದವರು ನ್ಯಾನೋ ಹೊರಮೈ, ಒಳಮೈ, ಚಕ್ರ ಹೀಗೆ ಸಿಕ್ಕಿದ್ದೆಲ್ಲವನ್ನೂ ಮುಟ್ಟಿ, ತಟ್ಟಿ ಪರೀಕ್ಷೆಗೇ ಒಳಪಡಿಸಿಬಿಟ್ಟರು. ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಅಷ್ಟು ಕಡಿಮೆ ವೆಚ್ಚದಲ್ಲಿ ಕಾರನ್ನು ಹೇಗೆ ತಯಾರಿಸಬಹುದು ಎಂದು.ಟಾಟಾ ಅಧಿಕಾರಿಯೊಬ್ಬರು ಹೇಳುವಂತೆ, ವಿಶ್ವದ ಅತ್ಯಂತ ಅಗ್ಗದ ಕಾರು ಎಂದು ನ್ಯಾನೋ ಪ್ರದರ್ಶನವಾದ ತಕ್ಷಣ ಜಿನಿವಾದಲ್ಲಿ ಪ್ರದರ್ಶನಕಾರರು, ಹಿರಿಯ ಉದ್ಯಮಿಗಳು, ಮಾಧ್ಯಮದವರು ನ್ಯಾನೋ ಮೇಲೆ ದೃಷ್ಟಿ ನೆಟ್ಟರು. ಕಾರಿನ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸ ಪರಿಶೀಲಿಸಿದರು. ಈ ಕ್ರಿಯೆ ಹೆಚ್ಚಾಗತೊಡಗಿದಂತೆ ಕಾರಿಗೆ ಹಾನಿಯಾಗುತ್ತದೆ ಎಂದು ಕಾರಿಗೆ ಲಾಕ್ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು. ಎಲ್ಲರೂ ತುಂಬ ಆಕ್ರಮಣಕಾರಿಯಾಗಿ ಕಾರನ್ನು ಪರೀಕ್ಷಿಸಿ ನೋಡುತ್ತಿದ್ದರಲ್ಲದೆ, ಕೇವಲ ಸುಮಾರು 2000 ಡಾಲರ್ ವೆಚ್ಚದಲ್ಲಿ ಮಾಡಲಾಗಿದೆಯೆಂದರೆ ಯಾರೂ ನಂಬುತ್ತಿರಲಿಲ್ಲ ಎಂದರು.ಯುರೋಪ್‌ನಲ್ಲಿ ನ್ಯಾನೋ 2011ರಲ್ಲಿ ಬಿಡುಗಡೆಪ್ರದರ್ಶನದ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಾಟಾ ಅಧ್ಯಕ್ಷ ರತನ್ ಟಾಟಾ, ನ್ಯಾನೋ ಇದೇ ಮಾರ್ಚ್ 23ರಂದು ಭಾರತದ ಮಾರುಕಟ್ಟೆಗೆ ಪ್ರವೇಶ ಪಡೆದರೆ, ಐರೋಪ್ಯ ದೇಶಗಳ ಮಾರುಕಟ್ಟೆಯನ್ನು 2011ರಲ್ಲಿ ಪ್ರವೇಶಿಸಲಿದೆ ಎಂದು ದೃಢಪಡಿಸಿದರು.2010- 11 ರ ವೇಳೆಗೆ ಯುರೋಪಿಯನ್ ದೇಶಗಳಲ್ಲಿ `ನ್ಯಾನೋ ಯುರೋಪಾ'ದ ಬಿಡುಗಡೆ ಸಾಧ್ಯವಾಗಬಹುದು ಎಂಬ ವಿಶ್ವಾಸವಿದೆ ಎಂದ ರತನ್ ಟಾಟಾ, ಯುರೋಪಿಯನ್ ದೇಶಗಳಲ್ಲಿ ಈ ಕಾರಿನ ಬೆಲೆಯನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಯುರೋಪಿಯನ್ ದೇಶಗಳಲ್ಲಿ ಇದರ ಬೆಲೆಯನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಬೆಲೆಯನ್ನು ನಿಗದಿಗೊಳಿಸುವ ಮೊದಲು ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಜನಸಾಮಾನ್ಯರ ಕಾರು ಎಂಬ ಇಮೇಜನ್ನು ನ್ಯಾನೋ ಯುರೋಪ್‌ನಲ್ಲೂ ಹೊಂದಿರುತ್ತದೆ ಎಂದಷ್ಟೇ ಹೇಳಿದರು. ಟಾಟಾದ ನ್ಯಾನೋ ಯುರೋಪ್ ದೇಶಗಳಲ್ಲಿ ಜನಸಾಮಾನ್ಯರ ಮುಂದಿನ ನಂ.1 ಆಯ್ಕೆಯ ಕಾರಾಗಲಿದೆ ಎಂದು ರತನ್ ಟಾಟಾ ವಿಶ್ವಾಸ ವ್ಯಕ್ತಪಡಿಸಿದರು.ಜರ್ಮನಿಯ ಹಿರಿಯ ಉದ್ಯಮಿಯೊಬ್ಬರು ಹೇಳುವಂತೆ, ನ್ಯಾನೋ ಯುರೋಪ್ ದೇಶಗಳಲ್ಲಿ ಅಂತಹ ದೊಡ್ಡ ಸಂಚಲನವನ್ನೇನೂ ಮಾಡಲಾಗದು. ಆದರೆ, ಉತ್ತಮ ಆದಾಯವಂತೂ ತರಬಹುದು. ನ್ಯಾನೋ ಹೇಗಿದೆಯೆಂದು ನಮಗೆ ದೊಡ್ಡ ಕುತೂಹಲ ಇತ್ತು. ಈಗ ಅದು ಈಡೇರಿದೆ. ನ್ಯಾನೋ ಚೆನ್ನಾಗಿದೆ. ಆದರೆ ಇನ್ನೂ ಕೆಲವು ಸುಧಾರಣೆಗಳ ಅಗತ್ಯವಿದೆ ಎನ್ನುತ್ತಾರೆ. |