ಬೇಸಿಗೆ ಬರತೊಡಗುತ್ತಿದ್ದಂತೆಯೇ ಜನರ ತನು ತಣಿಸಲು ಹೊಸದೊಂದು ಪೇಯ ಮಾರುಕಟ್ಟೆಗೆ ಆಗಮಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಲಘುಪಾನೀಯಗಳಲ್ಲಿ ಕಾಂಡೋಮ್, ಗುಟ್ಕಾ ಪೊಟ್ಟಣ, ಹುಳ ಇತ್ಯಾದಿ ದೊರಕಿದ್ದು ಕೇಳಿದವರಿಗೆ ಇದೀಗ ಹೊಸ ಸುದ್ದಿ. ಪವಿತ್ರ ಎಂದು ಪರಿಗಣಿಸಲಾಗಿರುವ ಗೋಮೂತ್ರದಿಂದ ತಯಾರಿಸಿದ ಶುದ್ಧ ಸ್ವದೇಶೀ ಲಘುಪಾನೀಯ ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ವಿದೇಶೀ ಆಹಾರ ಪದಾರ್ಥಗಳು ದೇಶದ ಆಹಾರಪದ್ಧತಿಯನ್ನೇ ಹಾಳುಗೆಡಹುತ್ತಿವೆ ಎಂದು ಆರೋಪಿಸುತ್ತಿರುವ ಸ್ವದೇಶೀ ಆಂದೋಲನಕಾರರು, ಈ ಲಘು ಪಾನೀಯವನ್ನು ಮಾರುಕಟ್ಟೆಗಿಳಿಸುತ್ತಿದ್ದಾರೆ. ಗೋಮೂತ್ರದಿಂದ ತಯಾರಿಸುವ ಲಘುಪಾನೀಯವನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುತ್ತದೆ. ಆದರೆ ಇದು ಮಾರುಕಟ್ಟೆಗೆ ಲಗ್ಗೆ ಹಾಕಲಿರುವ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯಾವೆಲ್ಲಾ ಫ್ಲೇವರ್(ರುಚಿ)ಗಳಲ್ಲಿ ಲಭಿಸಲಿದೆ ಎಂಬುದೂ ತಿಳಿದಿಲ್ಲ.
ಗೋಮೂತ್ರವನ್ನು ಅಲೋ ವೆರಾ (ಲೋಳೆಸರ) ಮತ್ತು ನೆಲ್ಲಿಕಾಯಿ ಮುಂತಾದವುಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಇದು ಸಿಹಿಮೂತ್ರ ರೋಗ ಮತ್ತು ಕ್ಯಾನ್ಸರ್‌ಗೆ ಪ್ರತಿರೋಧಕ ಔಷಧೀಯ ಪೇಯವಾಗಿಯೂ ಕೆಲಸ ಮಾಡಬಲ್ಲುದು ಎನ್ನುತ್ತಾರೆ ಇದರ ತಯಾರಕರು.
'ಗೋಮೂತ್ರದಿಂದ ತಯಾರಿಸಲಾಗುವ ಒಂದು ಬಾಟಲಿ ಪೇಯದಲ್ಲಿ ಐದರಿಂದ ಆರು ಮಿ.ಲೀ. ಮಾತ್ರ ಗೋಮೂತ್ರ ಇರುತ್ತದೆ. ಇತರ ಉಪಯೋಗಕಾರಿ ಮೂಲಿಕೆಗಳನ್ನೂ ನಾವು ಬಳಸುತ್ತಿದ್ದೇವೆ. ಈ ಲಘುಪಾನೀಯವು ದೇಹಕ್ಕೆ ತಂಪುಕಾರಕ ಮಾತ್ರವೇ ಅಲ್ಲ, ಹಲವಾರು ಕಾಯಿಲೆಗಳಿಗೂ ನಿವಾರಕಾಗಿ ಕೆಲಸ ಮಾಡುತ್ತದೆ' ಎಂದು ಗೋಮೂತ್ರ ಪಾನೀಯ ತಯಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ರಾಮಾನುಜ ಮಿಶ್ರಾ ಹೇಳಿದ್ದಾರೆ.
ಗೋಮೂತ್ರ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಪಾರಂಪರಿಕ ನಂಬಿಕೆ ಮತ್ತು ಪ್ರಾಚೀನ ಔಷಧ ಶಾಸ್ತ್ರಗಳಲ್ಲಿಯೂ ಇದರ ಉಲ್ಲೇಖವಿದೆ. ಧಾರ್ಮಿಕ ಕಾರ್ಯಕ್ರಮವಿದ್ದರೆ, ಅದರಲ್ಲಿ ಗೋಮೂತ್ರವುಳ್ಳ (ಪಂಚಗವ್ಯ) ತೀರ್ಥ ಸೇವಿಸುವುದು ಅವಿಭಾಜ್ಯ ಅಂಗವೂ ಆಗಿದೆ.
ಈ ಗೋಮೂತ್ರಭರಿತ ಪಾನೀಯಕ್ಕೆ ಹೆಸರು ಮತ್ತು ಬೆಲೆ ಇನ್ನೂ ನಿರ್ಧರಿಸಿಲ್ಲ ಎಂದು ತಯಾರಿಕಾ ಸಂಸ್ಥೆ ಹೇಳಿದೆ. ಕಾನ್ಪುರದಲ್ಲಿರುವ ತಯಾರಿಕಾ ಘಟಕದಿಂದ ಈ ಪಾನೀಯವನ್ನು ದೇಶಾದ್ಯಂತ ಮಾರಾಟ ಮಾಡಲಾಗುತ್ತದೆ ಮತ್ತು ಖಂಡಿತವಾಗಿಯೂ ಪೆಪ್ಸಿ, ಕೋಕ್‌ಗಳಿಗೆ ಸವಾಲೊಡ್ಡಲಿದೆ ಎಂದು ಸಂಸ್ಥೆಯ ಉಸ್ತುವಾರಿ ಅಧಿಕಾರಿ ಪುರುಷೋತ್ತಮ್ ಹೇಳಿದ್ದಾರೆ. |