ನವದೆಹಲಿ: ದೇಶದ ಆರ್ಥಿಕತೆ 2009-10ರ ಮೂರು ಅಥವಾ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಬೆಳವಣಿಕೆ ಕಾಣಬಹುದಾಗಿದ್ದು, 2011ರ ವೇಳೆಗೆ ಶೇ.9ರಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಗೃಹ ಸಚಿವ ಪಿ.ಚಿದಂಬರಂ ಭವಿಷ್ಯ ನುಡಿದಿದ್ದಾರೆ.
ದೇಶದ ಆರ್ಥಿಕತೆ ಶೇ.7.1ರಷ್ಟು ಈ ವರ್ಷ ವಿಸ್ತರಿಸಲಿದ್ದು, ಮೂರನೇ ತ್ರೈಮಾಸಿಕ ಅವಧಿಯಲ್ಲಿ ಸ್ಥಳೀಯ ಉತ್ಪನ್ನಗಳ ಬೆಳವಣಿಗೆ ಸುಮಾರು ಶೇ.5.3ರಷ್ಟಿದೆ. ಇದರರ್ಥ ಜನವರಿಯಿಂದ ಮಾರ್ಚ್ ಒಳಗೆ 7.6ರಿಂದ ಶೇ.7.7ರಷ್ಟು ಆರ್ಥಿಕತೆಯ ಬೆಳವಣಿಗೆಯಾಗಿದೆ ಎಂದು ಚಿದಂಬರಂ ವಿವರಿಸಿದರು.
ಇಂಟರ್‌ನ್ಯಾಷನಲ್ ಬಾರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಜಾಗತಿಕ ಆರ್ಥಿಕ ಹಿಂಜರಿತ ಇದ್ದರೂ, ಕಳೆದ ಮೂರು ನಾಲ್ಕು ತಿಂಗಳ ಬೆಳವಣಿಗೆ ಗಮನಿಸಿದರೆ, ನಾವು ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ತಿಳಿಯುತ್ತದೆ. ಯಾಕೆಂದರೆ ಈ ಹಣಕಾಸು ವರ್ಷದ ಮೊದಲರ್ಧದಲ್ಲಿ ಶೇ.7.8ರಷ್ಟು ಆರ್ಥಿಕ ಬೆಳವಣಿಗೆಯಾಗಿದೆ. ಎರಡನೇ ಅರ್ಧದಲ್ಲಿ 6.5ರಷ್ಟು ಬೆಳವಣಿಗೆ ನಿರೀಕ್ಷಿಸಿದ್ದು, ಮೂರನೇ ತ್ರೈಮಾಸಿಕ ಜಿಡಿಪಿ ಮಾತ್ರ ಅಷ್ಟು ತೃಪ್ತಿಕರವಾಗಿಲ್ಲ ಎಂದರು. |