ಅಮೆರಿಕದ ಆರ್ಥಿಕ ಸಂಕಷ್ಟವು ಫೆಬ್ರವರಿ ತಿಂಗಳೊಂದರಲ್ಲೇ 6,51,000 ಉದ್ಯೋಗಿಗಳಿಗೆ ಮರ್ಮಾಘಾತ ನೀಡಿದ್ದು, ಆ ದೇಶದ ನಿರುದ್ಯೋಗ ಪ್ರಮಾಣವನ್ನು 25 ವರ್ಷಗಳಷ್ಟು ಹಿಂದಕ್ಕೆ ಅಂದರೆ ಶೇ.8.1ಕ್ಕೆ ಕೊಂಡೊಯ್ದಿದೆ ಎಂದು ಶುಕ್ರವಾರ ಬಿಡುಗಡೆಗೊಳಿಸಲಾದ ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಅಂದಾಜುಗಳ ಅನುಸಾರವಾಗಿಯೇ ಕಾರ್ಮಿಕ ಇಲಾಖೆಯಲ್ಲಿನ ಉದ್ಯೋಗಕಡಿತಗಳು ನಡೆಯುತ್ತಿವೆಯಾದರೂ, ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಳ್ಳಲು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವುದರೊಂದಿಗೆ ಮತ್ತಷ್ಟು ಗಂಭೀರ ಪರಿಸ್ಥಿತಿಯ ಮುನ್ನೆಚ್ಚರಿಕೆಯನ್ನೂ ನೀಡುತ್ತಿದೆ.
ಹಿಂದಿನ ಎರಡು ತಿಂಗಳ ಅಂದಾಜಿಗಿಂತ ಹೆಚ್ಚು ಉದ್ಯೋಗ ಕಡಿತಗಳಾಗಿವೆ. ಜನವರಿ ತಿಂಗಳಲ್ಲಿ 5.98 ಲಕ್ಷ ಅಂದಾಜಿಸಲಾಗಿತ್ತಾದರೂ, ಒಟ್ಟು 6.55 ಲಕ್ಷ ಉದ್ಯೋಗಿಗಳು ಬೀದಿ ಪಾಲಾಗಿದ್ದರೆ, ಅದಕ್ಕೂ ಹಿಂದಿನ ಡಿಸೆಂಬರ್ ತಿಂಗಳಲ್ಲಂತೂ 5.77 ಲಕ್ಷ ಅಂದಾಜು ಇದ್ದದ್ದು 6.81 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದು 1949ರ ಅಕ್ಟೋಬರ್ ಬಳಿಕದ ಅತ್ಯಂತ ದೊಡ್ಡ ಉದ್ಯೋಗ ನಷ್ಟ ದಾಖಲೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಶೇ.7.6 ಇದ್ದ ನಿರುದ್ಯೋಗ ಪ್ರಮಾಣವು ಫೆಬ್ರವರಿಗೆ ಶೇ.8.1ಕ್ಕೇರಿದೆ. ಇದು 1983ರ ಡಿಸೆಂಬರ್ ತಿಂಗಳಿಂದೀಚೆಗಿನ ಅತ್ಯಧಿಕ ನಿರುದ್ಯೋಗ ಪ್ರಮಾಣ. ಇದು ಮುಂಬರುವ ವರ್ಷದಲ್ಲಿ ಶೇ.10ಕ್ಕೇರಲೂಬಹುದು ಎಂಬುದು ತಜ್ಞರ ಕಳವಳಭರಿತ ಅಂದಾಜು.
ಈ ಪ್ರಮಾಣದಲ್ಲಿ ಆಗಿರುವ ನಷ್ಟವು ಚೇತರಿಸಿಕೊಳ್ಳಬೇಕಿದ್ದರೆ ಅದೆಷ್ಟು ವರ್ಷಗಳು ಬೇಕೋ ಎಂಬುದು ಆರ್ಥಿಕ ತಜ್ಞರ ಚಿಂತೆ. |