ಎರಡನೇ ವಿಶ್ವಯುದ್ಧದ ನಂತರ ಮೊದಲ ಬಾರಿಗೆ ಜಾಗತಿಕ ಆರ್ಥಿಕ ಕುಸಿತ ಕಾಣುತ್ತಿದೆ. ಅಭಿವೃದ್ಧಿ ದರ ಮತ್ತು ಸಂಪನ್ಮೂಲಗಳಲ್ಲಿ ಕನಿಷ್ಟ ಶೇ.5 ರಷ್ಟು ಇಳಿಕೆಯಾಗಿರುವುದರಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿಶ್ವಬ್ಯಾಂಕ್ ಆತಂಕ ವ್ಯಕ್ತಪಡಿಸಿದೆ. ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರಸಕ್ತ ವರ್ಷದಲ್ಲಿ ಅಂದಾಜು 270 ರಿಂದ 700 ಬಿಲಿಯನ್ ಡಾಲರ್‌ಗಳ ಹಣಕಾಸಿನ ಕೊರತೆಯನ್ನು ಎದುರಿಸಲಿವೆ. ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳನ್ನು ಗ್ರಾಹಕರು ದೂರವಿಡುವ ಸಾಧ್ಯತೆಗಳಿವೆ ಎಂದು ಹೇಳಿದೆ. ವಿಶ್ವದ 116 ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 94 ರಾಷ್ಟ್ರಗಳು ನಿಧಾನಗತಿಯ ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ.ಅದರಲ್ಲಿ 43 ರಾಷ್ಟ್ರಗಳು ಭಾರಿ ಪ್ರಮಾಣದ ಬಡತನವನ್ನು ಎದುರಿಸುತ್ತಿವೆ. ನಗರಗಳ ಮೂಲದ ರಫ್ತುವಹಿವಾಟುದಾರರು, ಕಟ್ಟಡ ನಿರ್ಮಾಣ, ಗಣಿ ಮತ್ತು ಉತ್ಪಾದಕ ಕ್ಷೇತ್ರಗಳ ಜಾಗತಿಕ ಆರ್ಥಿಕ ಕುಸಿತದಿಂದ ಹೆಚ್ಚಿನ ನಷ್ಟ ಅನುಭವಿಸಿವೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಿದೆ. ವಸ್ತ್ರೋದ್ಯಮದಲ್ಲಿ ಮುಂಚೂಣಿಯಲ್ಲಿದ್ದ ಕಂಬೋಡಿಯಾ ದೇಶದಲ್ಲಿ ಸುಮಾರು 30,ಸಾವಿರ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಚಿನ್ನಾಭರಣ, ವಜ್ರ, ವಾಹನೋದ್ಯಮ ಮತ್ತು ಜವಳಿ ರಫ್ತು ಕ್ಷೇತ್ರದಲ್ಲಿ ಕಳೆದ ವರ್ಷ ಭಾರತದಲ್ಲಿ ಸುಮಾರು 15 ಲಕ್ಷ ಉದ್ಯೋಗವನ್ನು ಕಳೆದುಕೊಂಡಿದೆ ಎಂದು ಪ್ರಕಟಿಸಿದೆ. ಮುಂಬರುವ ಶನಿವಾರದಂದು ಗ್ರುಪ್ 20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆ ನಡೆಯಲಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಮಾತ್ರ ಜಾಗತಿಕ ಆರ್ಥಿಕ ಕುಸಿತವನ್ನು ತಡೆಯಲಾಗದು ಎಂದು ವಿಶ್ವಬ್ಯಾಂಕ್ ವಿವರಣೆ ನೀಡಿದೆ. ಜಾಗತಿಕ ಆರ್ಥಿಕ ಕುಸಿತವನ್ನು ತಡೆಯಲು ಸರಕಾರಗಳು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಖಾಸಗಿ ಕ್ಷೇತ್ರ ಬ್ಯಾಂಕ್‌ಗಳು ಒಂದಾಗಿ ಆರ್ಥಿಕ ಕುಸಿತವನ್ನು ಎದುರಿಸಬೇಕಾಗಿದೆ ಎಂದು ವಿಶ್ವಬ್ಯಾಂಕ್ ಸಲಹೆ ನೀಡಿದೆ. |