ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 24 ಭಾರತೀಯ ಉದ್ಯಮಿಗಳು ಸ್ಥಾನಪಡೆದಿದ್ದು, ಟಾಪ್ 10 ರಲ್ಲಿ ನಾಲ್ಕು ಮಂದಿ ಭಾರತೀಯರಿದ್ದಾರೆ.ಕಳೆದ 13 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಕ್ಕೆ ತಳ್ಳಿ ಅವರ ಸ್ಥಾನವನ್ನು ವಾರೆನ್ ಬಫೆಟ್ ಅಲಂಕರಿಸಿದ್ದಾರೆ. ಉಕ್ಕು ಸಾಮ್ರಾಜ್ಯದ ಅಧಿಪತಿ, ಅರ್ಸೆಲ್ ಮಿತ್ತಲ್ ಕಂಪೆನಿ ಮಾಲೀಕರಾದ ಲಕ್ಷ್ಮಿ ಮಿತ್ತಲ್ 45 ಬಿಲಿಯನ್ ಡಾಲರ್‌ಗಳ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಂಡನ್ ನಿವಾಸಿಯಾದ ಮಿತ್ತಲ್ ಯುರೋಪ್‌ನ ಶ್ರೀಮಂತ ನಿವಾಸಿಯಾಗಿದ್ದಾರೆ ಎಂದು ಯುಎಸ್ ಬಿಜಿನೆಸ್ ಮ್ಯಾಗ್‌ಜಿನ್ ವರದಿ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಪೆಟ್ರೋಕೆಮಿಕಲ್ಸ್ ಮಾಲೀಕರಾದ ಮುಕೇಶ್ ಅಂಬಾನಿ 43 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನಪಡೆದಿದ್ದಾರೆ. ಮುಕೇಶ್ ಸಹೋದರ ಅನಿಲ ಅಂಬಾನಿ 42 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಆರನೇ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 23.8 ಬಿಲಿಯನ್ ಡಾಲರ್ ಸಂಪತ್ತಿನಲ್ಲಿ ಏರಿಕೆ ಕಂಡು ಸಹೋದರ ಮುಕೇಶ್‌ಗೆ ಸವಾಲೊಡ್ಡಿದ್ದಾರೆ. |