ಜಾಗತಿಕ ಆರ್ಥಿಕ ಕುಸಿತದಿಂದಾಗಿ ಏಪ್ರಿಲ್‌ನಿಂದ ಫೆಬ್ರವರಿ ತಿಂಗಳಲ್ಲಿ ಭಾರತದ ಕರಕೌಶಲ ವಸ್ತುಗಳ ರಫ್ತು ವಹಿವಾಟು ಶೇ.50 ರಷ್ಟು ಇಳಿಕೆ ಕಂಡು 13.53 ಬಿಲಿಯನ್ ಡಾಲರ್‌ಗಳಿಗೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.
ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿಕ್ರಾಫ್ಟ್ ಅಂಕಿ ಅಂಶಗಳ ಪ್ರಕಾರ ಕರಕೌಶಲ ವಸ್ತುಗಳ ರಫ್ತುವಹಿವಾಟು ಶೇ.54.62 ರಷ್ಟು ಇಳಿಕೆಯಾಗಿ, ಕಳೆದ ವರ್ಷ 29.88 ಬಿಲಿಯನ್ ಡಾಲರ್‌ಗಳಾಗಿದ್ದ ವಹಿವಾಟು ಪ್ರಸಕ್ತ ವರ್ಷದಲ್ಲಿ 13.53 ಬಿಲಿಯನ್ ಡಾಲರ್‌ಗಳಿಗೆ ಕುಸಿದಿದೆ ಎಂದು ವರದಿ ಮಾಡಿದೆ.
ಕರಕೌಶಲ ವಸ್ತುಗಳಿಗೆ ಪ್ರಮುಖ ಮಾರುಕಟ್ಟೆಗಳಾಗಿದ್ದ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಆರ್ಥಿಕ ಕುಸಿತದಿಂದಾಗಿ ರಫ್ತು ವಹಿವಾಟು ಕುಸಿತಗೊಂಡಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕರಕೌಶಲ ಕ್ಷೇತ್ರದಲ್ಲಿ ಸುಮಾರು ಏಳು ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದು, ತಯಾರಿಸಿದ ಕರಕೌಶಲ ವಸ್ತುಗಳಲ್ಲಿ ಶೇ.50 ರಷ್ಟನ್ನು ಅಮೆರಿಕಾ ದೇಶಕ್ಕೆ ರಫ್ತು ಮಾಡಲಾಗುತ್ತದೆ.
ಕೇಂದ್ರ ಸರಕಾರ ಪ್ರಸಕ್ತ ವರ್ಷದ ಸೆಪ್ಟೆಂಬರ್‌ವರೆಗೆ ಬಡ್ಡಿ ಅನುದಾನ ಸೇರಿದಂತೆ ಹಲವು ತೆರಿಗೆ ಕಡಿತಗಳನ್ನು ಘೋಷಿಸಿದ್ದು, ಮತ್ತು ವಿಶೇಷ ಕೃಷಿ ಮತ್ತು ಗ್ರಾಮ ಉದ್ಯೋಗ ಯೋಜನಾ ಅಡಿಯಲ್ಲಿ ಕರಕೌಶಲ ವಸ್ತುಗಳಿಗೆ ಪರವಾನಿಗಿ ನೀಡಿದ್ದರೂ ರಫ್ತು ವಹಿವಾಟಿನ ಸ್ಥಿತಿ ಇನ್ನೂ ಸುಧಾರಿಸಬೇಕಾಗಿದೆ ಎಂದು ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ಹೇಳಿಕೆ ನೀಡಿದೆ.
ಸರಕಾರದ ಉತ್ತೇಜನ ಪ್ಯಾಕೇಜ್‌ಗಳಿಂದ ಕರಕೌಶಲ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಿಲ್ಲ ಎಂದು ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ನ ಕಾರ್ಯಕಾರಿ ನಿರ್ದೇಶಕ ರಾಕೇಶ್ ಕುಮಾರ್ ಹೇಳಿದ್ದಾರೆ. |