ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಜಿಡಿಪಿ ದರ ಶೇ.7 ರ ಗುರಿಯನ್ನು ತಲುಪಲಿದೆ ಎನ್ನುವ ರಿಸರ್ವ್ ಬ್ಯಾಂಕ್‌ನ ಸಮೀಕ್ಷೆ ಹುಸಿಯಾಗುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್ ಹೇಳಿದ್ದಾರೆ. ಮುಂಬರುವ 2009-10 ರ ಸಾಲಿನ ಆರ್ಥಿಕ ವರ್ಷ ಸವಾಲಿನಿಂದ ಕೂಡಿದೆ. ಆರ್ಥಿಕ ಕುಸಿತವನ್ನು ತಡೆಯಲು ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಜಪಾನ್‌ನ ನಿಕೈ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗವರ್ನರ್ ಸುಬ್ಬಾರಾವ್ ತಿಳಿಸಿದ್ದಾರೆ.
ಏಷ್ಯಾದ ಮೂರನೇ ಆರ್ಥಿಕ ಶಕ್ತಿಯಾದ ಭಾರತ ಕಳೆದ ಮೂರು ವರ್ಷಗಳಿಂದ ಆರ್ಥಿಕ ಅಭಿವೃದ್ಧಿ ದರ ಶೇ.9 ರ ದರದಲ್ಲಿ ಸಾಗುತ್ತಿದ್ದು, ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.7 ರ ಗಡಿಯನ್ನು ತಲುಪುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವಬ್ಯಾಂಕ್‌ಗಳ ಮೂಲಕ ಜಾಗತಿಕ ಆರ್ಥಿಕತೆಯ ಕುಸಿತವನ್ನು ನಿಯಂತ್ರಿಸಬೇಕಾದ ಅಗತ್ಯತೆಯಿದೆ ಎಂದು ಹೇಳಿದ್ದಾರೆ.
ಶುಕ್ರವಾರದಂದು ಲಂಡನ್‌ನಲ್ಲಿ ನಡೆಯಲಿರುವ ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆಯಲ್ಲಿ ಸಮನ್ವಯದ ಮೇಲ್ವಿಚಾರಣೆ, ನಿಯಂತ್ರಣ ನೀತಿ ಮತ್ತು ಆರ್ಥಿಕ ಕುಸಿತವನ್ನು ಎದುರಿಸಿರುವ ಹಣಕಾಸು ಸಂಸ್ಥೆಗಳ ಪುನಶ್ಚೇತನಕ್ಕಾಗಿ ಸೂಕ್ತ ನಿಯಮಗಳ ಕುರಿತಂತೆ ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದು ಗವರ್ನರ್ ಸುಬ್ಬಾರಾವ್ ತಿಳಿಸಿದ್ದಾರೆ. |