ಬೆಂಗಳೂರು: ಜಾಗತಿಕ ಆರ್ಥಿಕ ಕುಸಿತದ ಕಾರಣದಿಂದ ಕಿಂಗ್‌ಫಿಶರ್ ಏರ್‌ಲೈನ್ಸ್ ತನ್ನ ಹಲವು ಯೋಜನೆಗಳನ್ನು ಸದ್ಯಕ್ಕೆ ಮುಂದೂಡಿದೆ. ಬೆಂಗಳೂರು- ದುಬೈ ಹಾರಾಟವನ್ನು ಆರಂಭಿಸಲು ಯೋಜನೆ ರೂಪಿಸಿದ್ದ ಕಿಂಗ್‌ಫಿಷರ್ ಸದ್ಯಕ್ಕೆ ಜೂನ್-ಜುಲೈವರೆಗೆ ಈ ಹಾರಾಟವನ್ನು ಆರಂಭಿಸದಿರಲು ತೀರ್ಮಾನಿಸಿದೆ.
ಈ ಹಿಂದೆ ನಿಗದಿಯಾಗಿದ್ದಂತೆ, ಬೆಂಗಳೂರು- ದುಬೈ ವಿಮಾನ ಹಾರಾಟ ಮಾರ್ಚ್ 7ರಂದು ಆರಂಭವಾಗಬೇಕಿತ್ತು. ಆದರೆ, ಜಾಗತಿಕ ಆರ್ಥಿಕ ಕುಸಿತ, ಹಾಗೂ ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಕುಸಿದ ವಿಮಾನ ದರಗಳಿಂದಾಗಿ ತನ್ನ ಯೋಜನೆಗಳನ್ನು ಕಿಂಗ್‌ಫಿಷರ್ ಸದ್ಯಕ್ಕೆ ಕೈಬಿಟ್ಟಿದೆ.
ಮೂಲಗಳ ಪ್ರಕಾರ, ಜೂನ್, ಜುಲೈ ತಿಂಗಳಲ್ಲಿ ಮಾರುಕಟ್ಟೆ ಬಲಗೊಳ್ಳದಿದ್ದರೆ, ಈ ಯೋಜನೆ ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ವೈಮಾನಿಕ ವಿಮರ್ಶಕರ ಪ್ರಕಾರ, ಪಶ್ಚಿಮ ಏಷ್ಯಾದ ಎಮಿರೈಟ್ಸ್, ಎಟಿಹ್ಯಾಡ್ ಎರ್‌ವೇಸ್‌ಗಳಲ್ಲಿ ಹಲವು ಟಿಕೆಟ್‌ಗಳು ಈಗ ಬಿಕರಿಯಾಗದೆ ಹಾಗೆ ಉಳಿಯುವುದೂ ಕಿಂಗ್‌ಫಿಷರ್‌ನ ಈ ನಿರ್ಧಾರಕ್ಕೆ ಕಾರಣವಾಗಿದೆ. ಅಲ್ಲದೆ ಏರ್‌ಟಿಕೆಟ್ ದರದಲ್ಲಿ ಶೇ.20-25ರಷ್ಟು ಇಳಿಕೆಯಾಗಿದೆ.
ಈಚಿನ ದಿನಗಳಲ್ಲಿ ಕೇವಲ ದುಬೈಗೆಂದೇ ಪ್ರಯಾಣಿಕರು ಸಿಗುವುದು ಕಡಿಮೆಯಾಗಿದ್ದು, ಅಮೆರಿಕ ಹಾಗೂ ಯುರೋಪ್ ಪ್ರಯಾಣಿಕರು ದುಬೈ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ದುಬೈಗೆ ಪ್ರಯಾಣಿಕರು ಲಭ್ಯವಾಗುತ್ತಾರೆ. ಕಿಂಗ್‌ಫಿಷರ್‌ನ ಈ ನಿರ್ಧಾರಕ್ಕೆ ಇದೂ ಒಂದು ಕಾರಣವಾಗಿರಬಹುದು ಎನ್ನುತ್ತವೆ ಮೂಲಗಳು. |