ಜಾಗತಿಕ ಆರ್ಥಿಕ ಕುಸಿತದಿಂದ ಕುಗ್ಗಿ ಹೋಗಿರುವ ಭಾರತದ ಆರ್ಥಿಕತೆ ಉಳಿದ ರಾಷ್ಟ್ರಗಳಿಗಿಂತ ಬಲುಬೇಗನೆ ಚೇತರಿಸಿಕೊಳ್ಳಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಡಿ ಸುಬ್ಬರಾವ್ ಹೇಳಿದ್ದಾರೆ. ಲಂಡನ್‌ನಲ್ಲಿ ನಡೆಯುತ್ತಿರುವ ಗ್ರೂಪ್-20 ಸಭೆಯಲ್ಲಿ ಭಾಗವಹಿಸಿದ ನಂತರ ಬಿಬಿಸಿ ವರ್ಲ್ಡ್‌ಗೆ ಸಂದರ್ಶನ ನೀಡಿದ ಸಂದರ್ಭ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಒಂದು ಅಭಿವೃದ್ಧಿಯ ಎಂಜಿನ್ ಇದ್ದಂತೆ. ಜಗತ್ತಿನ ಎಲ್ಲ ರಾಷ್ಟ್ರಗಳ ಪೈಕಿ ಭಾರತ ಒಂದೇ ಚೇತರಿಸಿಕೊಳ್ಳುತ್ತದೆ ಎಂಬುದು ನನ್ನ ಮಾತಿನ ಅರ್ಥವಲ್ಲ. ಬದಲಾಗಿ, ಆರ್ಥಿಕ ಕುಸಿತದಲ್ಲಿ ಜಾಗತಿಕವಾಗಿ ಚೇತರಿಕೆ ಕಾಣುತ್ತಿದ್ದಂತೆ ಭಾರತ ಉಳಿದ ರಾಷ್ಟ್ರಗಳಿಗಿಂತ ತುಂಬ ವೇಗವಾಗಿ ತನ್ನ ಮೊದಲಿನ ಸ್ಥಿತಿಯತ್ತ ಮರಳುವುದರಲ್ಲಿ ಸಂಶಯವಿಲ್ಲ ಎಂದು ಸುಬ್ಬರಾವ್ ಹೇಳಿದರು.
ಸುಬ್ಬರಾವ್ ಹೇಳುವಂತೆ, ಈ ಜಾಗತಿಕ ಕುಸಿತ ಕೇವಲ ಭಾರತದ ಆರ್ಥಿಕತೆಗೆ ಮಾತ್ರ ಪೆಟ್ಟು ನೀಡಿಲ್ಲ. ಉತ್ಪಾದನಾ ವಲಯಕ್ಕೆ ದೊಡ್ಡ ಪೆಟ್ಟನ್ನೇ ನೀಡಿದೆ. ಆದರೆ ಇದು ಯಾವಾಗ ಸರಿ ಹೊಂದುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ ಎಂದರು.
ಆದರೂ ಭಾರತದ ಆರ್ಥಿಕ ವಲಯ ಇನ್ನೂ ಸುಸ್ಥಿತಿಯಲ್ಲೇ ಇದೆ. ಸೆಂಟ್ರಲ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಕೆಲವು ವಿವೇಕಯುತವಾದ ಆರ್ಥಿಕ ನೀತಿಗಳಿಂದ ಇದು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಜಾಗತೀಕರಣದಿಂದ ಭಾರತಕ್ಕೆ ಸಾಕಷ್ಟು ಲಾಭಗಳಾಗಿವೆ ಎಂಬುದನ್ನು ಒತ್ತಿ ಹೇಳಿದ ಸುಬ್ಬರಾವ್, ಖಡ್ಗದ ಎರಡೂ ಬದಿಗಳಲ್ಲೂ ಅರಿತವುಳ್ಳ ಅಲಗು ಇದ್ದಂತೆಯೇ ಈ ಜಾಗತೀಕರಣ ಕೂಡಾ. ಇದರಿಂದ ಲಾಭವೂ ಇದೆ, ಜತೆಗೆ ತಕ್ಕ ಬೆಲೆಯೂ ನಾವೂ ತೆರಬೇಕಾಗುತ್ತದೆ ಎಂದರು. |