ಕೇಂದ್ರ ಸರಕಾರ ಉದ್ದೇಶಿತ 3ಜಿ ಸ್ಪೆಕ್ಟ್ರಂ ಹರಾಜು, ಏಪ್ರಿಲ್ ಮಧ್ಯಭಾಗದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಮುನ್ನ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿಲ್ಲ ಎಂದು ಉನ್ನತ ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ 3ಜಿ ಸ್ಪೆಕ್ಟ್ರಂ ಹರಾಜು ನಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. 3ಜಿ ಸ್ಪೆಕ್ಟ್ರ ದರ ನಿಗದಿ ಕುರಿತಂತೆ ಸಮಿತಿಯ ಸಚಿವರು ತೀರ್ಮಾನಕ್ಕೆ ಇಲ್ಲಿಯವರೆಗೆ ಬಂದಿಲ್ಲವಾದ್ದರಿಂದ ಹರಾಜು ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ್ ಬೆಹೂರಾ ತಿಳಿಸಿದ್ದಾರೆ.ಟೆಲಿಕಾಂ ಸಮಿತಿಯ 10 ಮಂದಿ ಸದಸ್ಯರಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ರಕ್ಷಣಾ ಸಚಿವ ಎ.ಕೆ.ಅಂಟೋನಿ, ಗೃಹ ಸಚಿವ ಪಿ.ಚಿದಂಬರಂ ,ಕೃಷಿ ಸಚಿವ ಶರದ್ ಪವಾರ್ ಮತ್ತು ದೂರಸಂಪರ್ಕ ಸಚಿವ ಎ.ರಾಜಾ ಸೇರ್ಪಡೆಯಾಗಿದ್ದಾರೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. ಕೇಂದ್ರ ರೈಲ್ವೆ ಖಾತೆ ಸಚಿವ ಲಾಲು ಯಾದವ್, ಸಚಿವ ಪಾಸ್ವಾನ್, ಕಾನೂನು ಸಚಿವ ಎಚ್.ಆರ್.ಭಾರಧ್ವಜ್ , ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಆನಂದ್ ಶರ್ಮಾ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಟೆಲಿಕಾಂ ಕಾರ್ಯದರ್ಶಿ ಬೆಹುರಿಯಾ ಹೇಳಿದ್ದಾರೆ. |