ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಇದ್ದ ಕೆಲಸವನ್ನೂ ಕಳೆದುಕೊಂಡು ಮನೆಯಲ್ಲಿ ಕೂತಿದ್ದೀರಾ? ಅಥವಾ ನಿಮ್ಮ ಸಂಗಾತಿ ಕೆಲಸ ಕಳೆದುಕೊಂಡಿರುವುದರಿಂದಲೋ, ಸಂಬಳ ಕಡಿತದಿಂದಲೋ ಈಗಾಗಲೇ ಇರುವ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲು ಆರ್ಥಿಕವಾಗಿ ಕಷ್ಟವಾಗುತ್ತಿದೆಯಾ? ಹಾಗಾದರೆ ಇನ್ನು ಹೆದರುವ ಅಗತ್ಯವಿಲ್ಲ. ನೀವು ಗೃಹಸಾಲವನ್ನು ಕಟ್ಟಲು ಕಷ್ಟವಾಗುತ್ತಿದ್ದರೆ, ಬ್ಯಾಂಕ್‌ಗಳು ನಿಮ್ಮ ಕಷ್ಟಕ್ಕೆ ಹೆಗಲು ಕೊಡಲು ತಯಾರಾಗಿವೆ!ಸಣ್ಣ ಉದ್ಯಮಿಗಳು ಹಾಗೂ ಯಾವುದೇ ವ್ಯಕ್ತಿ ತನ್ನ ಸಾಲದ ಕಂತನ್ನು ಕಟ್ಟುವ ಅವಧಿಯಲ್ಲಿ ವ್ಯತ್ಯಾಸವಾಗಲು ಶುರುಮಾಡಿದ್ದರೆ, ಅಂಥವರಿಗೆ ಸ್ವಲ್ಪ ಸಮಯಾವಕಾಶ ನೀಡಬಹುದೆಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಹೇಳಿದೆ. ಗ್ರಾಹಕರು 2008ರ ಸೆಪ್ಟೆಂಬರ್ 1ರವರೆಗಿನ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸುತ್ತಿದ್ದು, ನಂತರದ ದಿನಗಳಲ್ಲಿ ಪಾವತಿಯಲ್ಲಿ ಕಷ್ಟ ಅನುಭವಿಸಿದರೆ, ಅಂಥವರ ಅಕೌಂಟನ್ನು ಪುನರ್‌ನಿರ್ಮಾಣ ಮಾಡಬಹುದು.ಈವರೆಗೆ, ಸಾಮಾನ್ಯವಾಗಿ 90 ದಿನಗಳ ಪಾವತಿಯ ಕರ್ತವ್ಯ ಚ್ಯುತಿಯ ನಂತರ, ಬ್ಯಾಂಕ್‌ಗಳು ಸಾಲವನ್ನು ಗ್ರಾಹಕರ ಆಸ್ತಿ ಪಡೆಯುವ ಮೂಲಕವೋ ಅಥವಾ ಇನ್ನಾವುದೋ ಮಾರ್ಗಗಳ ಮೂಲಕ ಸಾಲವನ್ನು ಹತೋಟಿಗೆ ತರುತ್ತಿದ್ದರು. ಅದೇನೇ ಇದ್ದರೂ, ಈಗಿನ ಆರ್ಥಿಕ ಕುಸಿತದಿಂದ ಗ್ರಾಹಕರ ಕಷ್ಟವನ್ನು ಅರಿತಿರುವ ಆರ್‌ಬಿಐ ಸಾಲದ ನಿಯಮಗಳನ್ನು ಸ್ವಲ್ಪ ಸಡಿಲಿಸಿದೆ. ಬ್ಯಾಂಕನ್ನು ನೇರವಾಗಿ ಸಂಪರ್ಕಿಸಿ, ಒಂದು ಅರ್ಜಿಯನ್ನು ನೀಡುವ ಮುಖಾಂತರ ಇಂತಹ ತೊಂದರೆಗಳಿಂದ ಗ್ರಾಹಕರು ತಪ್ಪಿಸಿಕೊಳ್ಳಬಹುದು. ಆದರೆ, ಈ ಅರ್ಜಿಗಳನ್ನು ಮಾ.31ರ ನಂತರ ಬ್ಯಾಂಕ್‌ಗಳಿಗೆ ನೀಡಬಹುದು.ಗೃಹಸಾಲ ಹಾಗೂ ಎಸ್‌ಎಂಇ ಸಾಲ (ಸಣ್ಣ ಹಾಗೂ ಮಧ್ಯಮ ಉದ್ಯಮ ಸಾಲ)ಗಳನ್ನು ಪುನರ್‌ನಿರ್ಮಾಣ ಮಾಡಬೇಕಾದ ಪರಿಸ್ಥಿತಿ ಇದೆ. ರಿಯಲ್ ಎಸ್ಟೇಟ್ ಉದ್ಯಮಿಗಳೂ ಈ ಕೋರಿಕೆಯನ್ನು ಮಾಡಿದ್ದಾರೆ ಎನ್ನುತ್ತಾರೆ ವಿಜಯಾ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಲ್ಬರ್ಟ್ ತೌರೋ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಮಹಾಪರ ಆಲಿ ಹೇಳುವಂತೆ, ಸಾಲಗಳ ಪುನರ್‌ನಿರ್ಮಾಣ ಮಾಡುವಂತೆ ಕೋರಿ ಹಲವು ಅರ್ಜಿಗಳು ನಮಗೆ ಬಂದಿವೆ. ಗೃಹಸಾಲ ಪಡೆದವರು ಸುಶಿಕ್ಷಿತರು ಹಾಗೂ ಉತ್ತಮ ಪ್ರೊಫೆಷನಲ್ ಹಿನ್ನೆಲೆಯುಳ್ಳವರು. ಅವರಿಗೆ ತಮ್ಮ ಬಾಕಿಗಳನ್ನು ಪಾವತಿಸುವ ಅರಿವಿರುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಮಾತ್ರ ಅದು ಅವರಿಗೆ ಕಷ್ಟವಾಗುತ್ತಿದೆ ಎಂಬ ಅರಿವು ನಮಗಿದೆ. ಹೀಗಾಗಿ ಸಾಲದ ಇಎಂಐ ಮೊತ್ತವನ್ನು ಕಡಿಮೆಗೊಳಿಸುವ ಜತೆಗೆ ಅವಧಿಯನ್ನು ಹೆಚ್ಚು ಮಾಡುತ್ತಿದ್ದೇವೆ. ಅವರಿಗೆ ಎಷ್ಟು ಸಾಧ್ಯವೋ ಅಷ್ಟನ್ನು ಈಗ ಪಾವತಿಸಬಹುದು ಎಂದು ಗ್ರಾಹಕರಿಗೆ ನಾವು ಹೇಳಿದ್ದೇವೆ. ಪರಿಸ್ಥಿತಿ ಸುಧಾರಣೆಯಾದ ಮೇಲೆ ಮತ್ತೆ ಸಾಲವನ್ನು ಮೊದಲಿದ್ದ ರೂಪಕ್ಕೆ ಪುನರ್‌ನಿರ್ಮಾಣ ಮಾಡಬಹುದು ಎನ್ನುತ್ತಾರೆ. |