ದೇಶದ ಮೂಲಸೌಕರ್ಯ ಯೋಜನೆಗಳಿಗೆ ನೀಡುವ ಬಡ್ಡಿ ದರವನ್ನು ಕಡಿತಗೊಳಿಸಿ ಶೇ.7-8ಕ್ಕೆ ಇಳಿಕೆ ಮಾಡಿದಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಯೋಜನಾ ಆಯೋಗದ ಸದಸ್ಯ ಕಿರಿಟ್ ಪರೀಖ್ ಸಲಹೆ ನೀಡಿದ್ದಾರೆ.
ಪ್ರಸ್ತುತ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಶೇ.13ರಿಂದ ಶೇ.11.50 ರಷ್ಟು ಬಡ್ಡಿ ದರವನ್ನು ವಿಧಿಸುತ್ತಿದ್ದು ಅದನ್ನು ಶೇ.7 - 8 ರಷ್ಟು ಇಳಿಕೆಗೊಳಿಸುವುದರಿಂದ ಉತ್ತೇಜನ ನೀಡಿದಂತಾಗುತ್ತದೆ ಎಂದು ಪಾರೀಖ್ ಮೂಲಸೌಕರ್ಯ ಯೋಜನೆ ಕುರಿತಂತೆ ಫೆಡರೇಶನ್ ಆಫ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಸಭೆಯಲ್ಲಿ ತಿಳಿಸಿದ್ದಾರೆ.
ದೀರ್ಘಾವಧಿ ಮೂಲಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡುವುದು ಸೂಕ್ತವಾಗಿರುತ್ತದೆ ಎಂದು ಹೇಳಿದ್ದಾರೆ.ಮಾರ್ಚ್ 7ಕ್ಕೆ ವಾರಂತ್ಯಗೊಂಡಂತೆ ವಾರ್ಷಿಕ ಹಣದುಬ್ಬರ ದರ ಐತಿಹಾಸಿಕ ದಾಖಲೆಯ ಶೇ.0.44 ರಷ್ಟು ತಲುಪಿದೆ.
ಹಣದುಬ್ಬರ ಇಳಿಕೆಯಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತಷ್ಟು ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಮಾಡಬಹುದಾಗಿದೆ ಎಂದು ಪಾರೀಖ್ ತಿಳಿಸಿದ್ದಾರೆ. |