ಜಗತ್ತಿನ ಅತಿ ಕಡಿಮೆ ದರದ ಕಾರು ನ್ಯಾನೋ ಕೇವಲ 15 ದಿನಗಳಲ್ಲಿ 10 ಲಕ್ಷ ಕಾರುಗಳ ಮುಂಗಡ ಬುಕ್ಕಿಂಗ್ ಗುರಿಯನ್ನು ತಲುಪಿ ದಾಖಲೆ ಸ್ಥಾಪಿಸುವ ಸಾಧ್ಯತೆಗಳಿವೆ ಎಂದು ಟಾಟಾ ಮೋಟಾರ್ಸ್ ಕಂಪೆನಿಯ ಮೂಲಗಳು ತಿಳಿಸಿವೆ.ದೇಶದಲ್ಲಿ ಪ್ರಥಮ ಬಾರಿಗೆ 1995-96ರಲ್ಲಿ ಫಿಯೆಟ್ ಉನೊ ಕಾರು 2.90 ಲಕ್ಷ ಮುಂಗಡ ಕಾರುಗಳ ಬುಕ್ಕಿಂಗ್ ದಾಖಲೆ ಸ್ಥಾಪಿಸಿತ್ತು. ಕೇವಲ ಎರಡು ವಾರಗಳಲ್ಲಿ 10 ಲಕ್ಷ ಕಾರುಗಳ ಮುಂಗಡ ಬುಕ್ಕಿಂಗ್‌ನಿಂದಾಗಿ ಪ್ರತಿ ಕಾರಿನ ಮುಂಗಡ ದರ 70 ಸಾವಿರ ರೂಪಾಯಿಗಳಂತೆ ಅಂದಾಜು 7 ಸಾವಿರ ಕೋಟಿ ರೂಪಾಯಿಗಳ ಸಂಗ್ರಹವಾಗಲಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.ದೇಶದಾದ್ಯಂತವಿರುವ ಟಾಟಾ ಮೋಟಾರ್ಸ್ ಡೀಲರ್‌ಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳು ಮುಂಗಡ ಬುಕ್ಕಿಂಗ್ ಹಣವನ್ನು ಸ್ವೀಕರಿಸಲಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.ಉತ್ತರ ಖಾಂಡ್‌ನ ಪಂಥನಗರದಲ್ಲಿರುವ ಘಟಕದಲ್ಲಿ ತಿಂಗಳಿಗೆ 3 ಸಾವಿರ ಕಾರುಗಳನ್ನು ಮಾತ್ರ ತಯಾರಿಸಲು ಸಾಧ್ಯವಿದ್ದು, ಮೊದಲ ಹಂತದ ಕಾರುಗಳನ್ನು ಉತ್ತರಖಾಂಡ್ ಘಟಕದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.ಗುಜರಾತ್‌ನ ಸನಂದ್ ಘಟಕ ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿದ್ದು, ವಾರ್ಷಿಕವಾಗಿ 2.50 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಟಾಟಾ ಮೋಟಾರ್ಸ ಮೂಲಗಳು ತಿಳಿಸಿವೆ. ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಯಾಗುವುದರೊಂದಿಗೆ ದೇಶದ ಕಾರು ಮಾರುಕಟ್ಟೆ ಶೇ.65 ರಷ್ಟು ವಿಸ್ತಾರವಾಗಲಿದೆ.ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷ ಕಾರು ಮಾರಾಟದಲ್ಲಿ ಶೇ.20 ರಷ್ಟು ಏರಿಕೆಯಾಗಲಿದೆ ಎಂದು ಕ್ರೈಸಿಲ್ ಸಮೀಕ್ಷಾ ಸಂಸ್ಥೆ ಅಧ್ಯಯನ ವರದಿಯಲ್ಲಿ ತಿಳಿಸಿದೆ.ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ಡ್ರಾನಲ್ಲಿ ಆಯ್ಕೆಯಾದವರು ನ್ಯಾನೋ ಕಾರು ಪಡೆಯಲಿದ್ದಾರೆ ಎಂದು ಟಾಟಾ ಮೋಟಾರ್ಸ್ ಅಧಿಕಾರಿಗಳು ತಿಳಿಸಿದ್ದಾರೆ. |