ಜಗತ್ತಿನ ಅತಿ ಕಡಿಮೆ ದರದ ಬಹುನಿರೀಕ್ಷಿತ ನ್ಯಾನೋ ಕಾರನ್ನು ಟಾಟಾ ಮೋಟಾರ್ಸ್‌ನ ಮುಖ್ಯಸ್ಥ ರತನ್ ಟಾಟಾ ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ, 623 ಸಿಸಿ ಇಂಜಿನ್ ಸಾಮರ್ಥ್ಯದ ನ್ಯಾನೋ ಕಾರು ಪ್ರತಿ ಲೀಟರ್‌ಗೆ 23.6ಕಿ.ಮಿ. ಮೈಲೇಜ್ ದೂರವನ್ನು ಕ್ರಮಿಸಲಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.ದೇಶದಾದ್ಯಂತವಿರುವ ಮಧ್ಯಮವರ್ಗದ ಜನತೆಯ ನ್ಯಾನೋ ಕಾರಿನ ನಿರೀಕ್ಷೆ ಅಂತ್ಯವಾಗಿದ್ದು, ಕೊಟ್ಟ ಮಾತಿಗೆ ತಪ್ಪದಂತೆ ರತನ್ ಟಾಟಾ 1 ಲಕ್ಷ ರೂ. ದರದ ನ್ಯಾನೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಡಿಸೆಂಬರ್ 1998ರಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆ ಟಾಟಾ ಇಂಡಿಕಾ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 1945ರಲ್ಲಿ ವಾಹನೋದ್ಯಮಕ್ಕೆ ಕಾಲಿರಿಸಿದ ಟಾಟಾ ಸಂಸ್ಥೆ, 2500 ಡಾಲರ್‌ಗಳ ದರದ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದು ಜಾಗತಿಕ ವಾಹನೋದ್ಯಮವನ್ನು ಅಚ್ಚರಿಗೊಳಿಸಿದೆ. 1954 ರಲ್ಲಿ ಟಾಟಾ ಇಂಜಿನಿಯರಿಂಗ್ ಆಂಡ್ ಲೋಕೊಮೊಟಿವ್ ಕಂಪೆನಿ ಲಿಮಿಟೆಡ್ ಪ್ರಾರಂಭವಾಗಿದ್ದು, ಪಶ್ಚಿಮ ಜರ್ಮನಿಯ ದೈಮ್ಲರ್ ಬೆಂಝ್ ಕಂಪೆನಿಯ ಸಹಭಾಗಿತ್ವದಲ್ಲಿ ಮಧ್ಯಮ ಗಾತ್ರದ ವಾಹನಗಳನ್ನು ತಯಾರಿಸಲು ಆರಂಭಿಸಿತ್ತು. ಕಳೆದ 2008ರಲ್ಲಿ ನವದೆಹಲಿಯಲ್ಲಿ ನಡೆದ 9ನೇಯ ಅಟೋ ಎಕ್ಸ್‌ಪೋ ಪ್ರದರ್ಶನದಲ್ಲಿ ನ್ಯಾನೋ ಕಾರು ಪ್ರದರ್ಶನ ಕಂಡಿತ್ತು. ಫಾರ್ಡ್ ಮಾಡೆಲ್ ಕಾರಿನ ನಂತರ ಜಗತ್ತಿನ ಅತಿ ಹೆಚ್ಚಿನ ಜನತೆಯ ನಿರೀಕ್ಷೆ ನ್ಯಾನೋ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಮಾತನಾಡಿ, ಮೇಲ್ದರ್ಜೆಗೇರಿಸಿದ ನ್ಯಾನೋ ಕಾರುಗಳನ್ನು ಪೂರ್ವ ಹಾಗೂ ಪಶ್ಚಿಮ ಯುರೋಪ್ ಹಾಗೂ ಇಂಗ್ಲೆಂಡ್, ಅಮೆರಿಕ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇಂದಿನಿಂದ ನ್ಯಾನೋ ಕಾರು ಟಾಟಾ ಮೋಟಾರ್ಸ್ ಶೋರೂಂಗಳಲ್ಲಿ ಲಭ್ಯವಿದ್ದು, ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಲಿ ಎಂದು ಅಶಿಸೋಣ ಎಂದು ರತನ್ ಟಾಟಾ ಸಂತಸ ವ್ಯಕ್ತಪಡಿಸಿದರು. ನ್ಯಾನೋ ಕಾರು 623 ಸಿಸಿ ಇಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, ನಾಲ್ಕು ಪ್ರಯಾಣಿಕರಿಗೆ ಅವಕಾಶವಿದ್ದು, ಪ್ರತಿ ಲೀಟರ್‌ಗೆ 23.6 ಕಿ.ಮಿ. ದೂರವನ್ನು ಕ್ರಮಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |