ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ಬಿಡುಗಡೆಯಿಂದಾಗಿ ವಾಹನೋದ್ಯಮ ಕ್ಷೇತ್ರದಲ್ಲಿ ಹೊಸ ಬೆಲವಣಿಗೆಗಳನ್ನು ತಂದಿದ್ದು, ದ್ವಿಚಕ್ರವಾಹನ ಹಾಗೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ 9ನೇ ಅಟೋ ಎಕ್ಸ್‌ಪೋ ಪ್ರದರ್ಶನದ ಒಂದು ವರ್ಷದ ನಂತರ ಟಾಟಾ ಮೋಟಾರ್ಸ್ 1 ಲಕ್ಷ ರೂ ಬೆಲೆಯ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಮುಂಬರುವ ಏಪ್ರಿಲ್ 9 ರಿಂದ ಏಪ್ರಿಲ್ 25 ರವರೆಗೆ ಕಾರು ಬುಕ್ಕಿಂಗ್‌ಗಾಗಿ ದಿನಾಂಕವನ್ನು ನಿಗದಿಪಡಿಸಿಲಾಗಿದ್ದು, ಮುಂಗಡ ಬುಕ್ಕಿಂಗ್ ದರವನ್ನು 2,999 ರೂ.ಗಳಿಗೆ ನಿಗದಿಪಡಿಸಿದೆ.ಅತಿ ಕಡಿಮೆ ದರದಲ್ಲಿ ನ್ಯಾನೋ ಕಾರು ಗ್ರಾಹಕರಿಗೆ ದೊರೆಯುತ್ತಿರುವುದರಿಂದ ದ್ವಿಚಕ್ರವಾಹನ ಹಾಗೂ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಗೆ ಧಕ್ಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಪ್ರಸಕ್ತ ವರ್ಷದಿಂದಲೇ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ವಹಿವಾಟು ಶೇ.10ರಿಂದ ಶೇ.12 ರಷ್ಟು ಕುಸಿತ ಕಾಣುವ ಸಾಧ್ಯತೆಗಳಿವೆ. ಸೆಕಂಡ್ ಹ್ಯಾಂಡ್ ಕಾರುಗಳ ದರ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.ಪ್ರೈಸ್‌ವಾಟರ್ ಹೌಸ್ ಕಾಪರ್ಸ್‌ನ ಪ್ರಮುಖ ಅಟೋಮೋಬೈಲ್ ಕನ್ಸಲ್‌ಟಂಟ್ ಅಬ್ದುಲ್ ಮಾಜಿದ್ ಮಾತನಾಡಿ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದ್ದರಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಕಟ್ಟೆ ಕುಸಿಯಲಿದೆ ಎಂದು ಹೇಳಿದ್ದಾರೆ. ಕಡಿಮೆ ದರದ ನ್ಯಾನೋ ಕಾರು ವಾಹನೋದ್ಯಮ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನು ತರುವ ಸಾಧ್ಯತೆಗಳಿದ್ದು, ಸೆಕೆಂಡ್ ಹ್ಯಾಂಡ್ ಕಾರು ಹಾಗೂ ದ್ವಿಚಕ್ರವಾಹನ ಮಾರುಕಟ್ಟೆ ಕುಸಿಯಲಿದೆ ಎಂದು ತಿಳಿಸಿದ್ದಾರೆ. |