ಜಾಗತಿಕ ಆರ್ಥಿಕ ಕುಸಿತದಿಂದಾಗಿ ಪ್ರಯಾಣಿಕ ಹಾಗೂ ಸರಕು ಸಾಗಾಣೆಯಲ್ಲಿ ಇಳಿಕೆ ಕಂಡಿದ್ದರಿಂದ ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳು 2009ರಲ್ಲಿ ಅಂದಾಜು 4.7 ಬಿಲಿಯನ್ ಡಾಲರ್ ನಷ್ಟ ಅನುಭವಿಸಲಿವೆ ಎಂದು ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್ ಕಳೆದ 2009ರ ಡಿಸೆಂಬರ್ ತಿಂಗಳಲ್ಲಿ ಸಮೀಕ್ಷೆ ನಡೆಸಿದ್ದು,2.5 ಬಿಲಿಯನ್ ಡಾಲರ್ ನಷ್ಟ ಎದುರಿಸುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿತ್ತು. ಪ್ರಸ್ತುತ ಅವಧಿಯಲ್ಲಿ ವಿಮಾನಯಾನ ಉದ್ಯಮ ಅಹಿತಕರ ಸ್ಥಿತಿಯಲ್ಲಿದ್ದು, ಜಾಗತಿಕ ಆರ್ಥಿಕ ಕುಸಿತದಿಂದ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂದು ಸಂಸ್ಥೆಯ ಪ್ರಧಾನ ನಿರ್ದೇಶಕ ಗಿಯೊವನ್ನಿ ಬಿಸಿಗ್ನಾನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್‌ನಲ್ಲಿ ಬ್ರಿಟಿಷ್ ಏರ್‌ವೇಸ್ ,ಕ್ಯಾಥೆ ಫೆಸಿಫಿಕ್ , ಯುನೈಟೆಡ್ ಏರ್‌ಲೈನ್ಸ್ ಅರಬ್ ಎಮಿರೇಟ್ಸ್ ಸೇರಿದಂತೆ 230 ವೈಮಾನಿಕ ಸಂಸ್ಥೆಗಳು ಸದಸ್ಯ ಸ್ಥಾನವನ್ನು ಹೊಂದಿವೆ. |