ಜಾಗತಿಕ ಆರ್ಥಿಕ ಕುಸಿತವಿದ್ದರೂ, ಭಾರತ ವಿಶ್ವದಲ್ಲಿ ಅತಿ ಹೆಚ್ಚು ಸ್ಥಳೀಯ ವೈಮಾನಿಕ ಪ್ರಯಾಣ ಅಭಿವೃದ್ಧಿ ಸಾಧಿಸಿದ ರಾಷ್ಟ್ರವಾಗಲಿದೆ ಎಂದು ಯುರೋಪಿಯನ್ ವೈಮಾನಿಕ ವಲಯದ ದೈತ್ಯ ಏರ್‌ಬಸ್ ಭವಿಷ್ಯ ನುಡಿದಿದೆ. ಜತೆಗೆ, ಕಳಂಕಿತವಾಗಿದ್ದರೂ ಸತ್ಯಂ ಸೇರಿದಂತೆ ಭಾರತದ ಇತರ ನಾಲ್ಕು ಐಟಿ ದೈತ್ಯ ಸಂಸ್ಥೆಗಳನ್ನು ತನಗೆ ಸಾಫ್ಟ್‌ವೇರ್ ಸರಬರಾಜು ಮಾಡಲು ಆಯ್ಕೆ ಮಾಡಿದೆ.ಇನ್‌ಫೋಸಿಸ್, ಎಚ್‌ಸಿಎಲ್, ಕ್ಯಾಡ್ಸ್, ಸತ್ಯಂ ಹಾಗೂ ಕ್ವೆಸ್ಟ್ ಸಂಸ್ಥೆಗಳನ್ನು ಏರ್‌ಬಸ್ ಸಂಸ್ಥೆ ತನ್ನ ಎ-380, ಎ-350 ಮತ್ತಿತರ ವಿಮಾನಗಳಿಗೆ ಸಾಫ್ಟ್‌ವೇರ್ ಸರಬರಾಜು ಮಾಡಲು ಆಯ್ಕೆ ಮಾಡಿದೆ. ಇಲ್ಲದೆ, ಇನ್ಫೋಸಿಸ್, ಸತ್ಯಂ, ಟಾಟಾ ಹಾಗೂ ವಿಪ್ರೋ ಸಂಸ್ಥೆಗಳಿಂದ ಏರ್‌ಬಸ್ ಐಟಿ ಸೇರಿದಂತೆ ಇನ್‌ಫಾರ್ಮೇಶನ್ ಸಿಸ್ಟಮ್ ಸರ್ವೀಸ್ ಪಡೆಯಲಿದೆ.ಕಳೆದ ಮೂರು ತಿಂಗಳಲ್ಲಿ ಸತ್ಯಂನಲ್ಲಿ ನಡೆದ ವಷಯದ ಬಗ್ಗೆ ನಮಗೆ ಅರಿವಿದೆ. ಆದರೆ, ಸತ್ಯಂ ಜತೆಗೆ ನಮಗೆ ಅತ್ಯುತ್ತಮ ಸಂಬಂಧವಿದೆ. ಏಪ್ರಿಲ್ ಅಂತ್ಯದಲ್ಲಿ ಸತ್ಯಂನಲ್ಲಿರುವ ಹಲವು ತೊಂದರೆಗಳು ಸರಿಯಾಗಲಿದೆ ಎಂದು ಅವರು ನಮಗೆ ವಿವರಿಸಿದ್ದಾರೆ. ಹೀಗಾಗಿ ನಾವು ಮತ್ತೆ ಸತ್ಯಂನ್ನೇ ನಮ್ಮ ಆಯ್ಕೆಯನ್ನಾಗಿ ಮಾಡಿದ್ದೇವೆ ಎನ್ನುತ್ತಾರೆ ಏರ್‌ಬಸ್ ನಿರ್ದೇಶಕ ಎಸ್.ದ್ವಾರಕನಾಥ್.ಏರ್‌ಬಸ್‌ನ ಯೋಜನಾ ಮುಖ್ಯಸ್ಥ ಕ್ರಿಸ್ಟಿಯನ್ ಶೆರರ್ ಮಾತನಾಡಿ, ಏರ್‌ಬಸ್ ಮುಂದಿನ ಒಂದು ದಶಕದ ಅವಧಿಗೆ ಸುಮಾರು ಒಂದು ಬಿಲಿಯನ್ ಡಾಲರ್‌ಗಳಷ್ಟು ಬಂಡವಾಳ ಹೂಡಲಿದ್ದು, ವಿಮಾನ ವಿನ್ಯಾಸದ ಜತೆಗೆ ಪ್ರಮುಖ ಆರು ಕಾರ್ಯಗಳನ್ನು ಕೈಗೊಳ್ಳಲಿದೆ. ಭಾರತದಲ್ಲಿ 2007-11ರವರೆಗೆ ವಿಶ್ವದಲ್ಲೇ ಅತಿ ಹೆಚ್ಚು ವೈಮಾನಿಕ ಪ್ರಯಾಣದಲ್ಲಿ ಅಭಿವೃದ್ಧಿ ಕಾಣಲಿದ್ದು, ಮುಂದಿನ ಎರಡು ದಶಕಗಳಲ್ಲಿ ಇದು ಇನ್ನೂ ಹೆಚ್ಚಲಿದೆ. ವೈಮಾನಿಕ ಕ್ಷೇತ್ರದ ಮಾರುಕಟ್ಟೆಯಲ್ಲಿ ಭಾರತ ಫ್ರಭುತ್ವ ಸಾಧಿಸಲಿದ್ದು, ಜಾಗತಿಕ ಆರ್ಥಿಕ ಕುಸಿತದಲ್ಲೂ ಭಾರತ ಶೇ.11.3ರಷ್ಟು ವೈಮಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.ಭಾರತ ಹೊರತು ಪಡಿಸಿದರೆ ಅದಕ್ಕೆ ಸರಿಸಮನಾಗಿ ವೈಮಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ ರಾಷ್ಟ್ರ ಚೀನಾ ಮಾತ್ರ. ಉಳಿದಂತೆ, ಯುರೋಪ್, ಜಪಾನ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಉಳಿದ ಹಲವು ದೇಶಗಳಲ್ಲಿ ಕಂಡ ಬೆಳವಣಿಕೆ ಒಂದಕಿಯಷ್ಟು ಮಾತ್ರ. ಅಂದರೆ, ಶೇ.9ಕ್ಕಿಂತಲೂ ಕಡಿಮೆ ಎಂದರು.ವೈಮಾನಿಕ ಪ್ರಯಾಣ ಕ್ಷೇತ್ರದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ಭಾರತಕ್ಕೆ 2007- 26ರವರೆಗೆ ಸುಮಾರು 992 ವಿಮಾನಗಳ ಅಗತ್ಯವಿದೆ. ಸಣ್ಣ ವಿಮಾನವಾದ ಎ-320, ಬೋಯಿಂಗ್-737 ಮತ್ತಿತರ ವಿಮಾನಗಳ ಬೇಡಿಕೆ 670ಕ್ಕೇರಿದರೆ, ದೊಡ್ಡ ವಿಮಾನಗಳಾದ ಎ-380, ಫ್ರೈಟರ್‌ಗಳ ಬೇಡಿಕೆ 60 ಹಾಗೂ 35 ಇದೆ ಎಂದರು.ವಿಮಾನ ತಯಾರಕರು ಆರು ವಲಯಗಳಾದ ಎಂಜಿನಿಯರಿಂಗ್, ಪೈಲಟ್ ತರಬೇತಿ, ನಿರ್ವಹಣೆ, ವಿಮಾನ ವಿನ್ಯಾಸ, ಅವಯವಗಳ ನಿರ್ಮಾಣ, ಐಟಿ ಹಾಗೂ ಸಂಶೋಧನಾ ಸೇವಾ ವಲಯಗಳಲ್ಲಿ ಭಾರತದ ಉದ್ಯಮ ಕ್ಷೇತ್ರದೊಂದಿಗಿನ ಸಹಕಾರ ಪಡೆಯುತ್ತಿದ್ದಾರೆ. |