ಬಿಡ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಂಡುಬರದಿರುವ ಹಿನ್ನೆಲೆಯಲ್ಲಿ ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನ ಶೇ.51 ರಷ್ಟು ಶೇರುಗಳ ಖರೀದಿಗಾಗಿ ಸಲ್ಲಿಸಿದ ಬಿಡ್‌ನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಸ್ಪೈಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಭಾರತ ಕಾರ್ಪೋರೇಟ್ ವಲಯದಲ್ಲಿ ಬಹುದೊಡ್ಡ ಹಗರಣ ಎನ್ನುವ ಖ್ಯಾತಿಗೆ ಒಳಗಾದ ಹೊರಗುತ್ತಿಗೆ ಸಂಸ್ಥೆ ಸತ್ಯಂ ಕಂಪ್ಯೂಟರ್, ಸಂಸ್ಥೆಯ ಶೇ.51 ರಷ್ಟು ಶೇರುಗಳ ಖರೀದಿಗೆ ಸಲ್ಲಿಸಿದ ಬಿಡ್‌ದಾರರ ಅರ್ಜಿಗಳನ್ನು ಅಡಳಿತ ಮಂಡಳಿ ಪರಿಶೀಲಿಸುತ್ತಿದ್ದು, ಬಿಡ್‌ದಾರರ ಅಂಕಿ ಅಂಶಗಳು ಹಾಗೂ ಕಂಪೆನಿಯ ಆರ್ಥಿಕ ಸ್ಥಿತಿಗತಿಯ ಮಾಹಿತಿಯನ್ನು ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸತ್ಯಂ ಅಡಳಿತ ಮಂಡಳಿ ರವಾನಿಸಿದ ಪತ್ರ ಸಕಾರಾತ್ಮಕವಾಗಿಲ್ಲ. ಆದ್ದರಿಂದ ನಾವು ಬಿಡ್‌ನ್ನು ಮರಳಿಪಡೆಯುವ ಸಾಧ್ಯತೆಗಳಿವೆ.ಬಿಡ್ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವಂತೆ ಸತ್ಯಂ ಅಡಳಿತ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಸ್ಪೈಸ್ ಮುಖ್ಯಸ್ಥ ಬಿ.ಕೆ.ಮೋದಿ ಹೇಳಿದ್ದಾರೆ.
ಸ್ಪೈಸ್‌ನೊಂದಿಗೆ ದೇಶದ ಇಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಲಾರ್ಸನ್ ಆಂಡ್ ಟೌಬ್ರೋ ಮತ್ತು ಐಟಿ ಸಂಸ್ಥೆಯಾದ ಟೆಕ್ ಮಹೇಂದ್ರಾ ಕಂಪೆನಿಗಳು ಸತ್ಯಂ ಶೇರುಗಳ ಖರೀದಿಗಾಗಿ ಬಿಡ್ ಸಲ್ಲಿಸಿವೆ.ಸರಕಾರದಿಂದ ನೇಮಕವಾದ ಸತ್ಯಂ ಅಡಳಿತ ಮಂಡಳಿ ಬಿಡ್‌ದಾರರ ಅರ್ಹತೆಯನ್ನು ಪರಿಶೀಲಿಸುತ್ತಿದೆ ಎಂತದು ಸತ್ಯಂ ಮೂಲಗಳು ತಿಳಿಸಿವೆ.
ನಮಗೆ ಅಗತ್ಯವಾಗಿರುವುದು ಪಾರದರ್ಶಕತೆ. ಅದು ನಮಗೆ ದೊರೆಯಲಿಲ್ಲ. ಇತರ ಪ್ರತಿಸ್ಪರ್ಧಿ ಬಿಡ್‌ದಾರರ ಬಗ್ಗೆ ನಮಗೆ ಮಾಹಿತಿಯಿಲ್ಲ. ಹರಾಜಿನ ಕುರಿತಂತೆ ಸತ್ಯಂ ಅಡಳಿತ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲವೆಂದು ಮೋದಿ ಆರೋಪಿಸಿದ್ದಾರೆ. |