ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದ್ದರಿಂದ ಅಲ್ಪ ಪ್ರಮಾಣದ ಪ್ರಭಾವ ಬೀರುವ ಸಾಧ್ಯತೆಗಳಿದ್ದರೂ ಮಾರುತಿ 800 ಮಾಡೆಲ್ ಕಾರಿನ ದರಗಳನ್ನು ಕಡಿತಗೊಳಿಸುವುದಿಲ್ಲ ಎಂದು ದೇಶದ ಪ್ರಮುಖ ಕಾರು ತಯಾರಿಕೆ ಸಂಸ್ಥೆಯಾದ ಮಾರುತಿ ಸುಝುಕಿ ಇಂಡಿಯಾ ಹೇಳಿಕೆ ನೀಡಿದೆ. ನ್ಯಾನೋ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿದ್ದರಿಂದ ಮಾರುತಿ 800 ಮಾಡೆಲ್ ಮೇಲೆ ಅಲ್ಪ ಮಟ್ಟಿಗೆ ಪರಿಣಾಮಗಳಾಗುವ ಸಾಧ್ಯತೆಗಳಿವೆ. ಆದರೆ ನ್ಯಾನೋ ಪ್ರವೇಶದಿಂದಾಗಿ ದರ ಕಡಿತ ಮಾಡುವ ಯೋಚನೆಯಿಲ್ಲ ಎಂದು ಮಾರುತಿ ಸುಝುಕಿ ಇಂಡಿಯಾದ ಮುಖ್ಯಸ್ಥ ಆರ್.ಸಿ.ಭಾರ್ಗವಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ನ್ಯಾನೋ ಕಾರಿಗೆ ಪ್ರತಿಯಾಗಿ ಸ್ಪರ್ಧೆ ನಡೆಸುವ ಯೋಜನೆ ಕುರಿತು ಪ್ರಶ್ನಿಸಿದಾಗ, ನ್ಯಾನೋ ಕ್ಷೇತ್ರವೇ ಬೇರೆ ನಮ್ಮ ಕ್ಷೇತ್ರವೇ ಬೇರೆಯಾಗಿದೆ. ಆದರೆ ನ್ಯಾನೋ ಪ್ರವೇಶದಿಂದಾಗಿ ಕಾರು ಮಾರುಕಟ್ಟೆ ವಿಸ್ತಾರವಾಗಲಿದೆ ಎಂದು ನುಡಿದರು. ಪ್ರಸಕ್ತ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟ ಉತ್ತಮವಾಗಿದ್ದು, ಲೋಕಸಭಾ ಚುನಾವಣೆ ನೂತನ ಸರಕಾರದ ನೀತಿಗಳು ಬಡ್ಡಿದರ, ಗ್ರಾಹಕ ದರಗಳಲ್ಲಿ ಏರುಪೇರಾಗುವ ಸಾಧ್ಯತೆಗಳಿರುವುದರಿಂದ ಮುಂದಿನ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟದ ಕುರಿತಂತೆ ಭವಿಷ್ಯ ನುಡಿಯುವುದು ಕಷ್ಟವಾಗಿದೆ ಎಂದು ಭಾರ್ಗವಾ ಹೇಳಿದ್ದಾರೆ. |