ನವದೆಹಲಿ: ಸಾಮಾನ್ಯ ಮಧ್ಯಮ ವರ್ಗದ ಜನರ ಕಾರು ಕೊಳ್ಳುವ ಕನಸನ್ನು ನನಸಾಗಿಸಲು ಹೊರಬಂದ ಟಾಟಾದ ನ್ಯಾನೋ ಕಾರು ದ್ವಿಚಕ್ರ ವಾಹನ ಕಂಪನಿಗಳ ನಿದ್ದೆಗೆಡಿಸಲಿದೆಯೇ ಎಂಬ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ದ್ವಿಚಕ್ರ ವಾಹನ ತಯಾರಕ ಕಂಪನಿಗಳೆಲ್ಲವೂ ನ್ಯಾನೋ ಮಾರಾಟದಿಂದ ದ್ವಿಚಕ್ರ ವಾಹನ ಮಾರಾಟಕ್ಕೆ ಯಾವುದೇ ಪರಿಣಾಮ ಬೀರದು ಎಂದು ಹೇಳಿದ್ದಾರೆ.
ಹೀರೋ ಹೊಂಡಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪವನ್ ಮಂಜಾಲ್ ಪ್ರಕಾರ, ನ್ಯಾನೋ ಕಾರು ದರವನ್ನು ಪ್ರಕಟಿಸಿದಂದಿನಿಂದಲೂ ದ್ವಿಚಕ್ರ ವಾಹನ ಮಾರಾಟಕ್ಕೇನೂ ಹೊಡೆತ ಬಿದ್ದಿಲ್ಲ. ಅಲ್ಲದೆ, ಮುಂದೆಯೂ ಹೊಡೆತ ಬೀಳಲಿಕ್ಕಿಲ್ಲ ಎಂದೇ ಅಂದಾಜಿಸಲಾಗಿದೆ ಎಂದರು.
ಟಿವಿಎಸ್ ಮೋಟಾರ್ಸ್ ಸಂಸ್ಥೆಯ ಮುಖ್ಯಸ್ಥ ವೇಣು ಶ್ರೀನಿವಾಸನ್ ಹೇಳುವ ಪ್ರಕಾರ, ಕಾರಿನ ನಿರ್ವಹಣಾ ವೆಚ್ಚಕ್ಕೂ, ದ್ವಿಚಕ್ರ ವಾಹನದ ನಿರ್ವಹಣಾ ವೆಚ್ಚಕ್ಕೂ ತುಂಬ ವ್ಯತ್ಯಾಸವಿದೆ. ಹೀಗಾಗಿ ನ್ಯಾನೋ ಖರೀದಿಗೂ ದ್ವಿಚಕ್ರ ವಾಹನ ಖರೀದಿಗೂ ಸಾಮ್ಯತೆ ಬರುವುದಿಲ್ಲ. ಇದರಿಂದ ದ್ವಿಚಕ್ರ ವಾಹನ ಮಾರಾಟಕ್ಕೂ ಯಾವುದೇ ಪರಿಣಾಮ ಬೀರದು ಎನ್ನುತ್ತಾರೆ.
ಬಜಾಜ್ ಆಟೋ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಜಾಜ್ ಅವರೂ ಟಿವಿಎಸ್ ಸಂಸ್ಥೆಯ ಹೇಳಿಕೆಯನ್ನು ಪುಷ್ಟೀಕರಿಸುತ್ತಾರೆ. ರಾಹುಲ್ ಬಜಾಜ್ ಹೇಳುವಂತೆ. ಬಜಾಜ್ ಪಲ್ಸರ್ ಕೊಳ್ಳುವ ಯುವಕ ನ್ಯಾನೋ ಕೊಳ್ಳುತ್ತಾನೆ ಎಂದು ನನಗನಿಸುವುದಿಲ್ಲ. ಆತನಿಗೆ ಬಜಾಜ್ ಪಲ್ಸರ್ ಬೇಕೇ ಹೊರತು, ಟಾಟಾದ ನ್ಯಾನೋ ಖಂಡಿತ ಅಲ್ಲ ಎನ್ನುತ್ತಾರೆ. ಹೀಗಾಗಿ, ದ್ವಿಚಕ್ರ ವಾಹನ ಸಂಸ್ಥೆಗಳಿಗೆ ನ್ಯಾನೋ ಆಗಮನದಿಂದ ಮಾರಾಟದಲ್ಲಿ ಹಿನ್ನಡೆ ಉಂಟಾಗಲಾರದು ಎಂಬುದು ಎಲ್ಲರ ಒಟ್ಟು ಅಭಿಪ್ರಾಯ. |