ಇಂಟರ್‌ನ್ಯಾಷನಲ್ ಬಿಜಿನೆಸ್ ಮಶಿನ್ಸ್ ಕಾರ್ಪೋರೇಶನ್ ಅಮೆರಿಕದಲ್ಲಿರುವ 5 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಹಲವು ಉದ್ಯೋಗಗಳನ್ನು ಭಾರತಕ್ಕೆ ವರ್ಗಾಯಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಂತಜ್ಞಾನ ದೈತ್ಯ ಕಂಪೆನಿಯಾದ ಐಬಿಎಂ, ಅಮೆರಿಕ ಮೂಲದ ಉದ್ಯೋಗಿಗಳನ್ನು ಕಡಿತಗೊಳಿಸಿ ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿದೆ.
ಇಂಟರ್‌ನ್ಯಾಷನಲ್ ಬಿಜಿನೆಸ್ ಮಶಿನ್ಸ್ ಕಾರ್ಪೋರೇಶನ್ ಕಂಪೆನಿಯಲ್ಲಿ ಅಂದಾಜು 4 ಲಕ್ಷ ವಿದೇಶಿ ಉದ್ಯೋಗಿಗಳ ಕಾರ್ಯನಿರ್ವಹಿಸುತ್ತಿದ್ದು,2006ನೇ ಸಾಲಿಗೆ ಹೋಲಿಸಿದಲ್ಲಿ ಶೇ.65 ರಷ್ಟು ಹೆಚ್ಚಳವಾಗಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದೆ.
ಪ್ರೋಕ್ಟರ್ ಆಂಡ್ ಗ್ಯಾಂಬಲ್‌ನಂತಹ ಕಾರ್ಪೋರೇಟ್ ಡಾಟಾ ಸೆಂಟರ್ ಗ್ರಾಹಕ ಕಂಪೆನಿಗಳಿಗೆ ಮಾನವ ಸಂಪನ್ಮೂಲಗಳ ಒದಗಿಸುತ್ತಿದ್ದು, ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ವಹಿವಾಟು ಇಳಿಕೆಯಾಗಿದ್ದರಿಂದ ಉದ್ಯೋಗಿಗಳ ವಜಾಕ್ಕೆ ನಿರ್ಧರಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಗ್ರಾಹಕ ಕಂಪೆನಿಗಳು ಗುತ್ತಿಗೆಯನ್ನು ಮುಕ್ತಾಯಗೊಳಿಸಿದ್ದರಿಂದ ಕೆಲ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಹಲವು ಗ್ರಾಹಕ ಕಂಪೆನಿಗಳ ಕಾರ್ಯವನ್ನು ನಿರ್ವಹಿಸಲು ಭಾರತದಲ್ಲಿರುವ ಐಬಿಎಂ ಉದ್ಯೋಗಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿಯ ನಂತರ ವಿದೇಶಗಳಲ್ಲಿ ಉದ್ಯೋಗವಕಾಶ ನೀಡಲಾಗುವುದು ಎಂದು ಐಬಿಎಂ ಹೇಳಿಕೆ ನೀಡಿದೆ. |