ಲಂಡನ್‌ನಿಂದ ಬಾಂಗ್ಲಾ ದೇಶದ ರಾಜಧಾನಿ ಢಾಕಾಗೆ ಕಳೆದ 34 ವರ್ಷಗಳಿಂದ ನೇರ ವಿಮಾನ ಸೌಲಭ್ಯವನ್ನು ಒದಗಿಸಿದ್ದ ಬ್ರಿಟಿಷ್ ಏರ್‌ವೇಸ್, ಪ್ರಯಾಣಿಕರ ಕೊರತೆಯಿಂದಾಗಿ ನಷ್ಟ ಎದುರಾಗುತ್ತಿರುವುದರಿಂದ ಇದೀಗ ರದ್ದುಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದೆ. ವಾರದಲ್ಲಿ ಮೂರು ಬಾರಿ ಲಂಡನ್‌ನಿಂದ ಢಾಕಾಗೆ ನೇರ ವಿಮಾನ ಸೌಲಭ್ಯವನ್ನು ಒದಗಿಸಿದ್ದ ಬ್ರಿಟಿಷ್ ಏರ್‌ವೇಸ್ ನಷ್ಟದ ಹಿನ್ನೆಲೆಯಲ್ಲಿ ಕೆಲ ಕಾಲ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 1975 ರ ಜನೆವರಿ ತಿಂಗಳಲ್ಲಿ ಲಂಡನ್‌ನಿಂದ ಬಾಂಗ್ಲಾ ರಾಜಧಾನಿ ಢಾಕಾಗೆ ವಿಸಿ10 ಏರ್‌ಕ್ರಾಫ್ಟ್ ವಿಮಾನ ಸೇವೆಯನ್ನು ಆರಂಭಿಸಿದ ಬ್ರಿಟಿಷ್ ಏರ್‌ವೇಸ್ ಆರಂಭದಲ್ಲಿ ವಾರದಲ್ಲಿ ಕೇವಲ ಒಂದು ದಿನ ಮಾತ್ರ ಹಾರಾಟ ನಡೆಸುತ್ತಿತ್ತು. ಬ್ರಿಟಿಷ್ ಏರ್‌ವೇಸ್ ತನ್ನ ನಿಲುವನ್ನು ಮರುಪರಿಶೀಲನೆ ನಡೆಸಬೇಕು ಎಂದು ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಆಫ್ ಬಾಂಗ್ಲಾದೇಶ ಮನವಿ ಮಾಡಿದೆ. |