ಅಮೆರಿಕದ ಜನರಲ್ ಮೋಟಾರ್ಸ್ ತನ್ನ ಸಂಸ್ಥೆಯ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಫ್ರಿಟ್ಸ್ ಹೆಂಡರ್ಸನ್ ಅವರನ್ನು ನೇಮಕ ಮಾಡಿದೆ. 50 ವರ್ಷದವರಾದ ಫ್ರಿಟ್ಸ್ ಹೆಂಡರ್ಸನ್ ಇದೇ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದರು.
ಈ ಮೊದಲು ಜನರಲ್ ಮೋಟಾರ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರಿಕ್ ವ್ಯಾಗನರ್ ಅವರು ದಿಢೀರ್ ರಾಜೀನಾಮೆ ನೀಡಿದ್ದರು. ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ ರಿಕ್ ವ್ಯಾಗನರ್ ಅವರು ರಾಜೀನಾಮೆ ನೀಡಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಒತ್ತಡವಿತ್ತು ಎನ್ನಲಾಗಿದೆ.
ಒಬಾಮಾ ಅವರು ಜನರಲ್ ಮೋಟಾರ್ಸ್ ಸಂಸ್ಥೆಗೆ ಸರ್ಕಾರದಿಂದ ಹೆಚ್ಚಿನ ಲೋನ್ ನೀಡಬೇಕಾದರೆ, ಸಂಸ್ಥೆಯನ್ನು ಪುನರ್ನಿರ್ಮಾಣ ಮಾಡಲು ಬಯಸಿದ್ದರು. ಹೀಗಾಗಿ ಒಬಾಮಾ ಅವರ ಅಧಿಕಾರಿಗಳು ರಿಕ್ ಅವರನ್ನು ಅಧಿಕಾರದಿಂದ ಕೆಳಗಿಳಿಯಲು ತಿಳಿಸಿದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ವೈಟ್‌ಹೌಸ್ ಮೂಲಗಳು ತಿಳಿಸಿರುವುದಾಗಿ ಅಮೆರಿಕ ಮೂಲದ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಸದ್ಯದ ಜಾಗತಿಕ ಆರ್ಥಿಕ ಹಿನ್ನಡೆಯಿಂದಾಗಿ, ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಜನರಲ್ ಮೋಟಾರ್ಸ್ ಹಾಗೂ ಕ್ರಿಸ್ಲರ್ ಸಂಸ್ಥೆ 21.6 ಬಿಲಿಯನ್ ಡಾಲರ್‌ಗಳ ಸಹಾಯವನ್ನು ಸರ್ಕಾರದಿಂದ ಯಾಚಿಸಿತ್ತು. ಇದಕ್ಕೂ ಮೊದಲು 17.4 ಬಿಲಿಯನ್ ಡಾಲರ್‌ಗಳನ್ನು ತುರ್ತು ಸಂದರ್ಭಕ್ಕಾಗಿ ಪಡೆಯಲಾಗಿತ್ತು. |