ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ ಶೇ.30 ರಷ್ಟು ಕುಸಿತ ಕಂಡಿದ್ದು, ಬೆಲೆ ಕುಸಿತಕ್ಕೆ ಕೇವಲ ನ್ಯಾನೋ ಒಂದೇ ಕಾರಣವಲ್ಲ. ಸಾಲದ ಕಂತು ಮರುಪಾವತಿಯ ಕೊರತೆ ಹಾಗೂ ವಾಹನೋದ್ಯಮ ತಯಾರಕರಿಂದ ಆಕರ್ಷಕ ವಿನಾಯತಿಯಿಂದಾಗಿ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗೆ ಹೆಚ್ಚಿನ ಕಾರುಗಳು ಸರಬರಾಜಾಗುತ್ತಿರುವುದರಿಂದ ಕಾರುಗಳ ದರಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ದರಗಳಲ್ಲಿ ಶೇ.20-30 ರಷ್ಟು ಇಳಿಕೆಯಾಗಿದೆ ಎಂದು ಮುಂಬೈ ಮೂಲದ ವಿ.ಎಂ ಮೋಟಾರ್ಸ್‌ನ ಡೀಲರ್ ಜಸ್ಪಾಲ್ ಸಿಂಗ್ ಹೇಳಿದ್ದಾರೆ. ಕಳೆದ ವರ್ಷದಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ದರ ಇಳಿಕೆಯಾಗುತ್ತಿದ್ದರೂ ಜನೆವರಿಯಿಂದ ದರದಲ್ಲಿ ಅತ್ಯಧಿಕ ಇಳಿಕೆ ಕಾಣುತ್ತಿವೆ. ಪ್ರತಿ ತಿಂಗಳು 20 ಕಾರುಗಳನ್ನು ಮಾರಲಾಗುತ್ತಿದ್ದು, ಪ್ರಸಕ್ತ ಕೇವಲ 7-8 ಕಾರುಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.ಐಸಿಐಸಿಐ ಬ್ಯಾಂಕ್‌ನ ವಾಹನ ಸಾಲ ವಿಭಾಗದ ಮುಖ್ಯಸ್ಥ ರವಿ ನಾರಾಯಣ್ ಮಾತನಾಡಿ, ಹೊಸ ಕಾರುಗಳ ಖರೀದಿಯಲ್ಲಿ ವಾಹನೋದ್ಯಮ ಸಂಸ್ಥೆಗಳು ಆಕರ್ಷಕ ರಿಯಾಯತಿಯನ್ನು ನೀಡುತ್ತಿರುವುದು, ಎರಡನೇಯದು ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಮೂರನೇಯದು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಆರ್ಥಿಕ ಸಹಾಯವನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿವೆ ಎಂದು ಹೇಳಿದ್ದಾರೆ. ನ್ಯಾನೋ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಸಣ್ಣ ಕಾರುಗಳಾದ ಮಾರುತಿ 800 ಮತ್ತು ಅಲ್ಟೋ ಕಾರುಗಳ ಮಾರಾಟದಲ್ಲಿ ಕೂಡಾ ಕುಸಿತವಾಗಿದೆ ಎಂದು ಕಾರ್ವಾಲೆ ಡಾಟ್ ಕಾಮ್ ನಡೆಸುತ್ತಿರುವ ಬನವಾರಿ ಲಾಲ್ ಶರ್ಮಾ ಹೇಳಿದ್ದಾರೆ. |