ಏರ್‌ಇಂಡಿಯಾ ವಿಮಾನಯಾನ ಸಂಸ್ಥೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಮುಂಬೈ ಮತ್ತು ದೆಹಲಿಯಿಂದ ಫ್ರಾಂಕ್‌ಫರ್ಟ್ ಮೂಲಕ ನ್ಯೂಯಾರ್ಕ್ ಹಾಗೂ ಚಿಕಾಗೊ ನಗರಗಳಿಗೆ ದಿನಕ್ಕೆ ಎರಡು ಬಾರಿ ವಿಮಾನ ಸಂಚಾರ ಸೌಲಭ್ಯವನ್ನು ಆರಂಭಿಸಿದೆ. ಏರ್‌ಇಂಡಿಯಾದ ಬೇಸಿಗೆ ವೇಳಾ ಪಟ್ಟಿಯ ಪ್ರಕಾರ, ಮುಂಬೈ ಮತ್ತು ದೆಹಲಿಯಿಂದ ಶನಿವಾರ ರಾತ್ರಿ ಹೊರಡುವ ವಿಮಾನ ರವಿವಾರದಂದು ಬೆಳಿಗ್ಗೆ ತಲುಪಲಿದ್ದು, ನಂತರ ನ್ಯೂಯಾರ್ಕ್ ಮತ್ತು ಚಿಕಾಗೊ ನಗರಗಳಿಗೆ ತಲುಪಲಿದೆ ಎಂದು ಏರ್‌ಇಂಡಿಯಾ ಮೂಲಗಳು ತಿಳಿಸಿವೆ. ನ್ಯೂಯಾರ್ಕ್ ಮತ್ತು ಚಿಕಾಗೊದಿಂದ ಹೊರಡುವ ವಿಮಾನಗಳು ಮುಂಬೈ ಮತ್ತು ದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಕೆಲ ಕಾಲ ಫ್ರಾಂಕ್‌ಫರ್ಟ್‌ನಲ್ಲಿ ನಿಲುಗಡೆಯಾಗಲಿದೆ ಎಂದು ಏರ್‌ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ನೇರ ವಿಮಾನ ಸೌಲಭ್ಯ ಒದಗಿಸಿ ಫ್ರಾಂಕ್‌ಫರ್ಟ್‌ನ್ನು ಮೂಲಕೇಂದ್ರವಾಗಿಸುವುದರಿಂದ ಜಾಗತಿಕ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದಂತಾಗುತ್ತದೆ ಎಂದು ಕೇಂದ್ರ ಯುರೋಪ್‌ನ ಏರ್‌ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ರತನ್ ಬಾಲಿ ತಿಳಿಸಿದ್ದಾರೆ. ಏರ್ ಇಂಡಿಯಾದ ನೂತನ ಸೇವೆಯಿಂದಾಗಿ ಫ್ರಾಂಕ್‌ಫರ್ಟ್‌ಗೆ ತೆರಳುವ ವಿಮಾನಗಳ ಸಂಖ್ಯೆ 28ಕ್ಕೆ ತಲುಪಿದೆ. |