ಜಾಗತಿಕ ಆರ್ಥಿಕ ಕುಸಿತದಿಂದಾಗಿ ಏಷ್ಯಾದ ಆರ್ಥಿಕ ಅಭಿವೃದ್ಧಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕಾಣದಂತಹ ಕುಸಿತ ಎದುರಾಗಿದ್ದು, ಪ್ರಸಕ್ತ ವರ್ಷದಲ್ಲಿ ಜಿಡಿಪಿ ದರ ಶೇ.5 ರಷ್ಟಾಗಲಿದೆ ಎಂದು ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ತಿಳಿಸಿದೆ.
ಮನಿಲಾ ಮೂಲದ ಏಷ್ಯಾ ಡೆವಲೆಪ್‌ಮೆಂಟ್ ಔಟ್‌ಲುಕ್ ಸಮೀಕ್ಷೆಯನ್ನು ನಡೆಸಿ ವಾರ್ಷಿಕ ವರದಿಯನ್ನು ಸಲ್ಲಿಸಿದ್ದು ಪ್ರಸಕ್ತ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.3.4 ರಷ್ಟು ಇಳಿಕೆ ಕಂಡು ಶೇ.5ಕ್ಕೆ ತಲುಪಲಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 2008 ರಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.1 ರಷ್ಟಿದ್ದು, 2009ರಲ್ಲಿ ಶೇ.2.1 ರಷ್ಟು ಇಳಿಕೆಯಾಗಲಿದೆ. ಆದರೆ 2010ರಲ್ಲಿ ಆರ್ಥಿಕತೆ ಸುಸ್ಥಿತಿಗೆ ಬರಲಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಚೀನಾ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7ಕ್ಕೆ ತಲುಪಲಿದ್ದು, ಆದರೆ ಸರಕಾರ ಸೂಕ್ತ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ 2010ರಲ್ಲಿ ಜಿಡಿಪಿ ದರ ಶೇ.8ಕ್ಕೆ ತಲುಪಲಿದೆ ಎಂದು ಪ್ರಕಟಿಸಿದೆ.
ಜಾಗತಿಕ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬಂದಲ್ಲಿ, 2010ರಲ್ಲಿ ದೇಶದ ಜಿಡಿಪಿ ದರ ಶೇ.6ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |