ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏಪ್ರಿಲ್ 1ರ ವೈರಸ್ ಬಂತೇ? ಆತಂಕ ಬೇಡ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಪ್ರಿಲ್ 1ರ ವೈರಸ್ ಬಂತೇ? ಆತಂಕ ಬೇಡ!
ವಿಶ್ವಾದ್ಯಂತ ಕಂಪ್ಯೂಟರ್ ಬಳಕೆದಾರರಲ್ಲಿ ದಿಗಿಲು ಹುಟ್ಟಿಸಿರುವ ಏಪ್ರಿಲ್ 1ರ ವೈರಸ್ 'ಕಾನ್ಫಿಕರ್' ಈಗಾಗಲೇ ಜಗತ್ತಿನ ಹಲವು ಕಂಪ್ಯೂಟರುಗಳಿಗೆ ವಿಷವುಣಿಸಿದೆಯಾದರೂ, ಬುಧವಾರ ಮತ್ತಷ್ಟು ಕಂಪ್ಯೂಟರುಗಳನ್ನು ಕಬಳಿಸಲಿದೆ ಎಂಬ ವರದಿಗಳು ಬರುತ್ತಿರುವಂತೆಯೇ, ನಿಮ್ಮ ಕಂಪ್ಯೂಟರುಗಳು ಎಷ್ಟು ಸುರಕ್ಷಿತ ಮತ್ತು ಹೇಗೆ ಅದನ್ನು ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ, ಅನಗತ್ಯ ಭಯಾತಂಕ ನಿವಾರಿಸಲು ಇಲ್ಲಿದೆ ಮಾಹಿತಿ.

ಈ ವೈರಸ್ ಪ್ರಭಾವವು ವಿಶ್ವದ ಹಲವು ಕಂಪ್ಯೂಟರುಗಳನ್ನು 'ಸ್ವಚ್ಛ'ಗೊಳಿಸಿದ್ದಂತೂ (ಯಾವುದೇ ವೈರಸ್ ಬಾಧೆಯಿಲ್ಲದಂತೆ, ಅಧಿಕೃತ ಸಾಫ್ಟ್‌ವೇರ್ ಅಳವಡಿಕೆಗಳ ಮೂಲಕ) ಸತ್ಯ.

ನಿಮ್ಮ ಕಂಪ್ಯೂಟರಿಗೆ ಕಾನ್ಫಿಕರ್ ಲಗ್ಗೆಯಿಟ್ಟಿದೆಯೇ ಎಂದು ತಿಳಿದುಕೊಳ್ಳಲು ಮತ್ತು ಅದನ್ನು ನಿವಾರಿಸಲು ಸರಳ ವಿಧಾನಗಳು, ಸಾಫ್ಟ್‌ವೇರ್‌ಗಳು ಉಚಿತವಾಗಿ ಲಭ್ಯವಿವೆ.

ತೀರಾ ಆತಂಕಕ್ಕೆ ಕಾರಣವಾದ ಸಂಗತಿಯೆಂದರೆ, ಈ ಕಾನ್ಫಿಕರ್ ಯಾವುದೇ ಮಾನವಶ್ರಮವಿಲ್ಲದೆಯೇ ಕಂಪ್ಯೂಟರಿನ ಒಳಹೊಕ್ಕು ಕುಳಿತುಕೊಳ್ಳಬಹುದಾಗಿದೆ. ಅಂದರೆ ಕಂಪ್ಯೂಟರಿನಿಂದ ಮತ್ತೊಂದು ಪಿಸಿಗೆ ತಿರುಗಾಡುತ್ತಾ, ಮೈಕ್ರೋಸಾಫ್ಟ್‌ನ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿರುವ ಸುರಕ್ಷತಾ ದೋಷವೊಂದರ ಸದುಪಯೋಗ ಮಾಡಿಕೊಳ್ಳುತ್ತಿರುತ್ತದೆ. ಈ ಸುರಕ್ಷತಾ ದೋಷವನ್ನು ಮೈಕ್ರೋಸಾಫ್ಟ್ ಕಂಪನಿಯು ಕಳೆದ ಅಕ್ಟೋಬರ್ ತಿಂಗಳಲ್ಲೇ ಸರಿಪಡಿಸಿ, ತನ್ನೆಲ್ಲಾ ಗ್ರಾಹಕರಿಗೆ ಅಪ್‌ಡೇಟ್‌ಗಳನ್ನು ಒದಗಿಸಿತ್ತು. ಆದರೆ ನಿಮ್ಮ ಕಂಪ್ಯೂಟರು ಮೈಕ್ರೋಸಾಫ್ಟ್‌ನಿಂದ ಸ್ವಯಂಚಾಲಿತ ಅಪ್‌ಡೇಟ್ ಪಡೆಯುವಂತೆ ಸೆಟ್ ಮಾಡದೇಹೋಗಿದ್ದರೆ, ನಿಮ್ಮ ಕಂಪ್ಯೂಟರುಗಳು ಕೂಡ ಇದರಿಂದ ಬಾಧೆಗೀಡಾಗಿರುವ ಸಾಧ್ಯತೆಗಳಿವೆ.

ಹೆಚ್ಚಿನ ವೈರಸ್‌ಗಳು ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನೆಲ್ಲಾ ನೇರಾನೇರ ನಿಷ್ಕ್ರಿಯಗೊಳಿಸಿಯೇ ಮುಂದುವರಿಯುತ್ತವೆ. ಇದು, ಎಲ್ಲೋ ಏನೋ ತೊಂದರೆಯಾಗಿದೆ ಎಂಬ ಬಗ್ಗೆ ಸುಳಿವು ನೀಡುವಲ್ಲಿ ನಮಗೆ ಸಹಕಾರಿಯಾಗುತ್ತದೆ. ಆದರೆ ಕಾನ್ಫಿಕರ್ ಮಾತ್ರ ಹಾಗಲ್ಲ. ಕಾನ್ಫಿಕರ್ ಯಾವ ಪಿಸಿಯೊಳಗೆ ಸೇರಿಕೊಳ್ಳುತ್ತದೆಯೋ, ಅದಕ್ಕೆ ಮೈಕ್ರೋಸಾಫ್ಟ್ ಮತ್ತು ಯಾವುದೇ ಆಂಟಿವೈರಸ್ ಸಾಫ್ಟ್‌ವೇರ್ ವೆಬ್‌ಸೈಟುಗಳಿಗೆ ಹೋಗುವುದಕ್ಕೆ ಬಿಡುವುದೇ ಇಲ್ಲ. ಅಂದರೆ, ನೀವು ಬೇರಾವುದೇ ವೆಬ್ ಸೈಟಿಗೆ ಭೇಟಿ ನೀಡಬಹುದು. ಆದರೆ ಮೈಕ್ರೋಸಾಫ್ಟ್ ಹಾಗೂ ಆಂಟಿವೈರಸ್ ಅಪ್‌ಡೇಟ್‌ಗಳನ್ನು ನೀಡುವ ಸೈಮಾಂಟೆಕ್, ಮೆಕಾಫಿ, ಎಫ್-ಸೆಕ್ಯೂರ್ ಮುಂತಾದವುಗಳ ತಾಣಗಳಿಂದ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡದಂತೆ ನಿಮ್ಮನ್ನು ಅದು ತಡೆಯುತ್ತದೆ.

ನಿಮ್ಮ ಕಂಪ್ಯೂಟರಿಗೂ ಕಾನ್ಫಿಕರ್ ಸೇರಿಕೊಂಡುಬಿಟ್ಟಿದ್ದರೆ ಏನು ಮಾಡಬೇಕು. ಒಂದಿಷ್ಟು ಶ್ರಮ ಪಡಬೇಕು. ಅತ್ಯುತ್ತಮ ವಿಧಾನವೆಂದರೆ, ಕಾನ್ಫಿಕರ್ ವೈರಸ್ ದಾಳಿ ಮಾಡಿಲ್ಲದ ನಿಮ್ಮ ಗೆಳೆಯನ ಕಂಪ್ಯೂಟರಿನ ಮೂಲಕ, ಆಂಟಿವೈರಸ್ ಸಾಫ್ಟ್‌ವೇರ್ ಅಪ್‌ಡೇಟ್ ಹಾಗೂ ಮೈಕ್ರೋಸಾಫ್ಟ್‌ನ ಸುರಕ್ಷತಾ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಇ-ಮೇಲ್ ಮೂಲಕ ನಿಮಗೆ ಕಳುಹಿಸಲು ಹೇಳಿ. ಅದನ್ನು ರನ್ ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು ಎನ್ನುತ್ತಾರೆ ತಜ್ಞರು.

ಈ ವೈರಸ್ ವಿರುದ್ಧವೇ ಹೋರಾಡಲು ಹುಟ್ಟಿಕೊಂಡಿರುವ ಕಾನ್ಫಿಕರ್ ವರ್ಕಿಂಗ್ ಗ್ರೂಪ್ ಎಂಬ ಕಂಪನಿಗಳ ಒಕ್ಕೂಟದ ವೆಬ್‌ಸೈಟಿನಲ್ಲಿ ಕಾನ್ಫಿಕರ್ ತೆಗೆದುಹಾಕಲು ಸಾಕಷ್ಟು ಸಾಫ್ಟ್‌ವೇರ್‌ಗಳು ಉಚಿತವಾಗಿ ಲಭ್ಯವಿವೆ.

ಆದರೆ ನೆನಪಿಡಿ. ಕಾನ್ಫಿಕರ್ ವೈರಸ್ ಬಾಧಿತ ಮೆಶಿನ್‌ಗಳು 'ರಿಮೂವಲ್ ಟೂಲ್'ಗಳ ಹೆಸರಿನಲ್ಲಿ 'ಕಾನ್ಫಿಕರ್' ಎಂದಿದ್ದರೆ ಅದನ್ನು ಬಳಸುವುದಕ್ಕೂ ತಡೆಯೊಡ್ಡುತ್ತವೆ. ಅದಕ್ಕೆ ಕೆಲವು ಆಂಟಿವೈರಸ್ ಮಾರಾಟಗಾರರು, ತಮ್ಮ ರಿಮೂವಲ್ ಟೂಲ್‌ಗಳ ಹೆಸರು ಬದಲಾಯಿಸಿದ್ದಾರೆ ಅಥವಾ ಅದು ಕಾನ್ಫಿಕರ್‌ನ ಮತ್ತೊಂದು ರೂಪ ಎಂದು ಪ್ರೋಗ್ರಾಂಗೆ ಸುಳ್ಳುಹೇಳುವಂತೆ ಅದನ್ನು ರೂಪಿಸಿ, ಈ ವೈರಸ್ಸಿಗೆ ಮಂಕುಬೂದಿ ಎರಚಲು ಪ್ರಯತ್ನಿಸಿದ್ದಾರೆ.

ಈ ಕಾನ್ಫಿಕರ್ ವೈರಸ್ ನಿಮ್ಮ ಕಂಪ್ಯೂಟರಿನ ಒಳಗೆ ಹೊಕ್ಕರೆ ಏನೆಲ್ಲಾ ಮಾಡಬಹುದೆಂದರೆ, ಗುಪ್ತ ಡೇಟಾ ಕದ್ದು ಅದನ್ನು ಪ್ರೋಗ್ರಾಂ ಮಾಡಿರುವವರಿಗೆ ರವಾನಿಸಬಹುದು, ಸುಮ್ಮಸುಮ್ಮನೇ ನಿಮ್ಮಿಂದ ಮಾಹಿತಿ ಕೇಳುತ್ತಿರಬಹುದು, ಪಾಸ್‌ವರ್ಡ್‌ಗಳನ್ನೂ ವೈರಸ್ ರೂಪಿಸಿದ ಧೂರ್ತರಿಗೆ ರವಾನಿಸಬಹುದು... ಹೀಗಾಗಿ ಮೇಲಿನ ಕ್ರಮಗಳನ್ನು ಅನುಸರಿಸಿದರೆ ಈ ಬಗ್ಗೆ ಭೀತಿ ಬೇಕಾಗಿಲ್ಲ ಎಂಬುದು ಕಂಪ್ಯೂಟರ್ ತಜ್ಞರ ಹೇಳಿಕೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಚ್‌‌ಎಎಲ್ ಮುಖ್ಯಸ್ಥರಾಗಿ ಕನ್ನಡಿಗ ನಾಯಕ್ ನೇಮಕ
ಆರ್ಥಿಕ ಹಿಂಜರಿತಕ್ಕೆ ಆರ್ಥಿಕ ಸಂಸ್ಥೆಗಳೇ ಕಾರಣ: ಮುಖರ್ಜಿ
ಅಶೋಕ್ ನಾಯಕ್ ಎಚ್‌ಎಎಲ್ ಅಧ್ಯಕ್ಷ
ವಿಜಯ ಬ್ಯಾಂಕ್ ಬಡ್ಡಿದರ ಇಳಿಕೆ
ಪಾಕಿಸ್ತಾನಕ್ಕೆ ಐಎಂಎಫ್ ಹಣಕಾಸು ನೆರವು
ಅಮೆರಿಕ: 17 ತಿಂಗಳಿಗೆ ಕಾಲಿಟ್ಟ ಹಿಂಸರಿತ