ಭಾರತದಲ್ಲಿ 3ಜಿ ಸೇವೆಯನ್ನು ವಿಸ್ತ್ರತವಾಗಿ ನೀಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ಮತ್ತು ಎಂಟಿಎನ್‌ಎಲ್ ಅನ್ನು ಪಾಲುದಾರ ಸಂಸ್ಥೆಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಕೊರಿಯಾದ ಪ್ರಮುಖ ಇಲೆಕ್ಟ್ರಾನಿಕ್ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್ ತಿಳಿಸಿದೆ.
ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಂದಾಜು ಶೇ.45ರಷ್ಟು ಮಲ್ಟಿಮೀಡಿಯಾ ಹಾಗೂ ಟಚ್ ಸ್ಕ್ರೀನ್ ಪೋನ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆ ಹೊಂದಲಾಗಿದೆ ಎಂದು ಭರವಸೆ ವ್ಯಕ್ತಪಡಿಸಿದೆ.
ಭಾರತದಲ್ಲಿ 3ಜಿ ಸೇವೆ ನೀಡುವ ನಿಟ್ಟಿನಲ್ಲಿ ನಾವು ಬಿಎಸ್ಎನ್ಎಲ್ ಮತ್ತು ಎಂಟಿಎನ್‌ಎಲ್ ಜತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಆ ಕಾರಣಕ್ಕಾಗಿಯೇ 3ಜಿ ಸೇವೆಯ ಮೊಬೈಲ್ ಸೆಟ್‌ಗಳ ಆಯ್ಕೆಗಾಗಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿರುವುದಾಗಿಯೂ ಸ್ಯಾಮ್‌ಸಂಗ್ ಅಧ್ಯಕ್ಷ ಜುಂಗ್ ಸೂ ಶಿನ್ ತಿಳಿಸಿದ್ದಾರೆ.
ಅಲ್ಲದೇ ದೆಹಲಿಯಲ್ಲಿಯೂ 3ಜಿ ಸೇವೆಯ ಹ್ಯಾಂಡ್ ಸೆಟ್ಸ್ ಅನ್ನು ಎಂಟಿಎನ್‌ಎಲ್‌ಗೂ ಸರಬರಾಜು ಮಾಡುತ್ತಿರುವುದಾಗಿ ಹೇಳಿದರು. ಸ್ಯಾಮ್ ಸಂಗ್ ಈಗಾಗಲೇ 8ಮೆಗಾಫಿಕ್ಸಲ್ ಟಚ್ ಸ್ಕ್ರೀನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ವಿವರಿಸಿದರು. ಭಾರತದಲ್ಲಿ 3ಜಿ ಫೋನ್ ಬೆಲೆ 27,500ರೂ.ಗಳಾಗಿದೆ ಎಂದರು.
3ಜಿಯ ಈ ಹ್ಯಾಂಡ್ ಸೆಟ್ ಶೀಘ್ರ ಕನೆಕ್ಷನ್‌ನ ಇಂಟರ್ನೆಟ್ ಲಭ್ಯ, ವಿಡಿಯೋ ಟೆಲಿಫೋನಿ ಹಾಗೂ ಮಲ್ಟಿಮೀಡಿಯಾ ಸೇವೆಯೂ ಲಭ್ಯವಿರುವುದಾಗಿ ಹೇಳಿದರು. ಭಾರತದಲ್ಲಿ ನಾಲ್ಕು ವಿಧದ ಟಚ್ ಸ್ಕ್ರೀನ್ ಫೋನ್ ಅನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. |