ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗಾ ರಾಜು ನಡೆಸಿರುವ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಪ್ರಿಲ್ 9ರಂದು ದೋಷಾರೋಪ ಪಟ್ಟಿ ಸಲ್ಲಿಸಲಿದೆ.
"ನಾವು ಎಪ್ರಿಲ್ 9ರಂದು ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದೇವೆ. ಆದರೆ ಇದರ ಬಳಿಕವೂ ತನಿಖೆ ಮುಂದುವರಿಯಲಿದೆ" ಎಂದು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಹೇಳಿದ್ದಾರೆ. ಅವರು 10ನೆ ಡಿ.ಪಿ. ಕೋಹ್ಲಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಿಬಿಐ ಆರೋಪಪಟ್ಟಿ ಸಲ್ಲಿಕೆಯು ರಾಜು ನ್ಯಾಯಾಲಯದಿಂದ ಜಾಮೀನು ಪಡೆಯುವುದಕ್ಕೆ ಅಡ್ಡಿಯುಂಟುಮಾಡಬಹುದಾಗಿದೆ. ಆರೋಪಿಯೊಬ್ಬನನ್ನು ಬಂಧಿಸಿದ ಬಳಿಕ, ಆರೋಪಿಯು ಜಾಮೀನು ಪಡೆಯುವುದನ್ನು ತಪ್ಪಿಸಲು ಕಟ್ಟಳೆಕೈಗೊಳ್ಳುವ ಸಂಸ್ಥೆಯು ಬಂಧನದ 90 ದಿನದೊಳಗೆ ಆರೋಪಪಟ್ಟಿ ಸಲ್ಲಿಸಬೇಕಾಗಿದೆ.
ರಾಜು ಅವರ ತಪ್ಪೊಪ್ಪಿಗೆಯು ಸಹ ಆರೋಪಪಟ್ಟಿಯಲ್ಲಿ ಪುರಾವೆಯ ಭಾಗವಾಗಲಿದೆ ಎಂದು ಅವರು ನುಡಿದರು. ರಾಮಲಿಂಗಾ ರಾಜು ಈ ಹೇಳಿಕೆಯನ್ನು ಸೆಬಿಗೆ ನೀಡಿದ್ದು, ಇದನ್ನು ತಪ್ಪೊಪ್ಪಿಗೆ ಎಂದು ಪರಿಗಣಿಸಲಾಗುವುದು ಎಂದು ಕುಮಾರ್ ತಿಳಿಸಿದ್ದಾರೆ. |