2010ರಲ್ಲೂ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಚೇತರಿಕೆ ಸಾಧ್ಯವಾಗದೆ ಇರಬಹುದೆಂಬ ಬಗ್ಗೆ ಭೀತಿಯನ್ನು ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಬಿಕ್ಕಟ್ಟು ಬಗೆಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ನಾಯಕರಿಗೆ ಕರೆ ನೀಡಿದ್ದಾರೆ.
ಇಡೀ ವಿಶ್ವವೇ ಎದುರಿಸುತ್ತಿರುವ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿದಂತೆ ಅಭಿವೃದ್ದಿಶೀಲ ರಾಷ್ಟ್ರಗಳ ಪರ ವಾದವನ್ನು ಪ್ರಧಾನಿ ಮನಮೋಹನ್ ಸಿಂಗ್ ಜಿ-20 ಶೃಂಗಸಭೆಯಲ್ಲಿ ಗುರುವಾರ ಸಮರ್ಥವಾಗಿ ಮಂಡಿಸಿದರು.
ಮುಂದಿನ ಎರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸಾಕಷ್ಟು ಎಂದರೆ ಸುಮಾರು 500ಶತಕೋಟಿ ಡಾಲರ್‌ಗಳಷ್ಟು ಹೆಚ್ಚಿಸಬೇಕೆಂದು ಸಿಂಗ್ ಒತ್ತಾಯಿಸಿದರು.
ಸಮಾರು 250ಶತಕೋಟಿ ಡಾಲರ್‌ಗಳ ವಿಶೇಷ ಹಣ ಹಿಂತೆಗೆಯುವ ಹಕ್ಕು(ಎಸ್‌ಡಿಆರ್)ಗಳ ನಿಗದಿಗೂ ನಾವು ಒಪ್ಪಿಕೊಳ್ಳಬೇಕು. ಹಣದ ಹರಿವು ಅತ್ಯಂತ ಬಿಗಿಯಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಸುಮಾರು 80ಶತಕೋಟಿ ಡಾಲರ್‌ಗಳಷ್ಟು ಸಂಪನ್ಮೂಲಗಳನ್ನು ಒದಗಿಸಲಿದೆ ಎಂದು ಹೇಳಿದರು. |