ಭಾರತೀಯ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಎಚ್1ಬಿ ವಿಸಾ ಯೋಜನೆಯು 'ಸ್ಫರ್ಧಾತ್ಮಕ ಅನಾನುಕೂಲವನ್ನು' ತಡೆಯಲು ಅವಶ್ಯಕವಾಗಿದೆ ಎಂದು ಒಬಾಮ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದ್ದು, ಇಲ್ಲವಾದರೆ ಅಮೆರಿಕ ಕಂಪೆನಿಗಳು ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ಹೇಳಿದೆ.
ಅಮೆರಿಕದ ಮೂರು ಮಂಡಳಿಗಳು, ಒಂಬತ್ತು ವ್ಯಕ್ತಿಗಳು ಮತ್ತು ಇಬ್ಬರು ವಿದ್ಯಾರ್ಥಿಗಳು ದಾಖಲಿಸಿರುವ ಪ್ರಕರಣಕ್ಕೆ ಸಹಾಯಕ ಅಟಾರ್ನಿ ಜನರಲ್ ಮೈಕೆಲ್ ಎಫ್ ಹರ್ಟ್ಜ್ ಅವರು ನ್ಯಾಯಾಲಯದ ಮುಂದೆ ಈ ಅರಿಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ವೀಸಾದಲ್ಲಿರುವ ಎಂಜಿನಿಯರಿಂಗ್, ವಿಜ್ಞಾನ ಮತ್ತು ಇತರ ತಾಂತ್ರಿಕ ಪದವಿಗಳ ವಿದೇಶಿ ವಿದ್ಯಾರ್ಥಿಗಳು ಕೆಲಸ ಮಾಡಬಹುದಾದ ಅವಧಿಯನ್ನು ಈ ಹಿಂದಿನ ಒಂದು ವರ್ಷದಿಂದ 29 ತಿಂಗಳಿಗೆ ಏರಿಸಿರುವುದನ್ನು ಇವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಇದು ಈ ಹಿಂದಿನ ಬುಶ್ ಸರ್ಕಾರದ ನೀತಿ ನಿರ್ಧಾರವಾಗಿದ್ದು, ಇದನ್ನು ನ್ಯೂಜೆರ್ಸಿಯ ಕೆಳ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಅಲ್ಲಿ ಅರ್ಜಿ ವಜಾಮಾಡಲಾಗಿತ್ತು. ಇದೇ ಆರ್ಜಿದಾರರು ಕಳೆದ ತಿಂಗಳು ಫಿಲಿಡೆಲ್ಫಿಯದ ಮೇಲ್ಮನವಿ ನ್ಯಾಯಾಲಯದಲ್ಲಿ ಈ ನಿಯಮವನ್ನು ಪ್ರಶ್ನಿಸಿದ್ದಾರೆ. |