'ಸತ್ಯಂ' ಆರ್ಥಿಕ ಸಂಸ್ಥೆಯ ಮಹಾವಂಚನೆಯ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸತ್ಯಂನ ಪ್ರಮುಖ ಮೂರು ಮಂದಿಯನ್ನು ಭಾನುವಾರ ರಾತ್ರಿ ಬಂಧಿಸಿರುವುದಾಗಿ ಸಿಬಿಐನ ಡಿಐಜಿ ಲಕ್ಷ್ಮಿ ನಾರಾಯಣ್ ತಿಳಿಸಿದ್ದಾರೆ.
ಸತ್ಯಂ ವಂಚನೆಗೆ ಸಂಬಂಧಿಸಿದಂತೆ ಹಾಗೂ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ತಯಾರಿಸಿರುವ ಆರೋಪದ ಮೇಲೆ ಮತ್ತೆ ಮೂರು ಮಂದಿ ನೌಕರರನ್ನು ಕಳೆದ ರಾತ್ರಿ ಬಂಧಿಸಿರುವುದಾಗಿ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಸತ್ಯಂನ ಫೈನಾನ್ಸ್ ವಿಭಾಗದ ಉಪಾಧ್ಯಕ್ಷ ಜಿ.ರಾಮಕೃಷ್ಣ ಹಾಗೂ ಫೈನಾನ್ಸ್ ವಿಭಾಗದ ಇಬ್ಬರು ನೌಕರರಾದ ಡಿ.ವೆಂಕಟಪಾಟಿ ರಾಜು, ಶ್ರೀಶೈಲಂ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಈಗಾಗಲೇ ಬಂಧನದಲ್ಲಿರುವ ಸತ್ಯಂ ಕಂಪೆನಿಯ ಮಾಜಿ ಸಿಐಓ ವಡ್ಲಾಮಣಿ ಶ್ರೀನಿವಾಸ್ ತನಿಖೆಯ ವೇಳೆ ಇವರ ಹೆಸರನ್ನು ಬಹಿರಂಗಗೊಳಿಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು. |