ಜಾಗತಿಕ ಆರ್ಥಿಕ ಹಿಂಜರಿತ ಬಿಕ್ಕಟ್ಟು ಪರಿಹಾರಕ್ಕಾಗಿ ಇತ್ತೀಚೆಗೆ ಮುಕ್ತಾಯ ಕಂಡ ಜಿ-20ಶೃಂಗಸಭೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ಅನಿವಾಸಿ ಭಾರತೀಯ ಉದ್ಯಮಿ ಎಸ್.ಪಿ.ಹಿಂದುಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವ ಆರ್ಥಿಕ ಬಿಕ್ಕಟ್ಟನ್ನು ಅಲ್ಪಾವಧಿಯಲ್ಲಿ ಪರಿಹರಿಸುವ ಬಗ್ಗೆ ಜಿ-20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಧಾರ ಆಶಾಭಾವನೆ ಮೂಡಿಸಿದ್ದರೂ ಕೂಡ, ಅದು ಶಾಶ್ವತ ಅಥವಾ ದೀರ್ಘಾವಧಿಗೆ ಹೋಲಿಸಿದರೆ ಸಾಕಾಗದು ಎಂದು ಭವಿಷ್ಯ ನುಡಿದಿದ್ದಾರೆ.
ಬಡರಾಷ್ಟ್ರಗಳಿಗೆ ಧನ ಸಹಾಯ ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದ ಅವರು, ಬಡರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಭಿವೃದ್ಧಿ ಹೊಂದಿದ ದೇಶಗಳು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಆ ನಿಟ್ಟಿನಲ್ಲಿ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿ ಅದರ ಆಧಾರದ ಮೇಲೆಯೇ ಆರ್ಥಿಕ ನೆರವು ನೀಡಬೇಕು ಎಂದ ಹಿಂದುಜಾ, ಈ ಮೂಲಕ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಬೇಕು ಎಂದರು. |