ಟ್ರಕ್ ಮಾಲಕರೊಬ್ಬರಿಗೆ ಬಡ್ಡಿ ಸಮೇತ ಒಂದು ಲಕ್ಷರೂಪಾಯಿ ಪರಿಹಾರ ನೀಡುವಂತೆ ದೆಹಲಿ ಗ್ರಾಹಕರ ಆಯೋಗವು ನ್ಯೂ ಇಂಡಿಯಾ ಇನ್ಶೂರೆನ್ಸ್ ನಿಗಮಕ್ಕೆ ಆದೇಶ ನೀಡಿದೆ.
ಇದಲ್ಲದೆ, ಫಿರ್ಯಾದುದಾರರಾದ ಟ್ರಕ್ ಮಾಲಕ ಈಶ್ವರ್ ಸಿಂಗ್ ಅವರಿಗೆ ಸೇವಾಲೋಪಕ್ಕಾಗಿ ಐದು ಸಾವಿರ ಪರಿಹಾರವನ್ನೂ ನೀಡುವಂತೆ ತಿಳಿಸಿದೆ. ಈಶ್ವರ್ ಸಿಂಗ್ ಅವರು ಸಲ್ಲಿಸಿರುವ ಪಾವತಿ ಬಿಲ್ಲುಗಳನ್ನು ಪರಿಗಣಿಸದ ಕಾರಣ ಅವರು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
"ಗ್ರಾಹಕರ ವೇದಿಕೆಯು ರಸೀದಿಗಳ ವಿಸ್ತೃತ ವರದಿ, ಸಮೀಕ್ಷಕರು ಅಂದಾಜಿಸಿರುವ ಒಟ್ಟು ಮೊತ್ತ ಹಾಗೂ ದುರಸ್ತಿಗೆ ತಗುಲಿರುವ ಒಟ್ಟು ಮೊತ್ತ ಹಾಗೂ ಈಶ್ವರ್ ಸಿಂಗ್ ಅವರು ಸಲ್ಲಿಸಿರುವ ಬಿಲ್ಲುಗಳನ್ನು ಪರಿಶೀಲಿಸಿದೆ" ಎಂದು ನ್ಯಾಯಮೂರ್ತಿ ಜೆ.ಡಿ. ಕಪೂರ್ ಹೇಳಿದ್ದಾರೆ.
ವಿಮಾ ಸೌಲಭ್ಯ ಹೊಂದಿದ್ದ ವಾಹನವು ಹಾನಿಗೀಡಾಗಿದ್ದು, ಇದರ ದುರಸ್ಥಿಗಾಗಿ ಸಿಂಗ್ ಅವರು 1.23 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು. ಆದರೆ ಇವರ ಮನವಿಯನ್ನು ತಿರಸ್ಕರಿಸಿದ್ದ ವಿಮಾ ಸಂಸ್ಥೆಯು ಪರಿಹಾರ ಮೊತ್ತವನ್ನು 65,962 ರೂಪಾಯಿಗಳಿಗೆ ನಿಗದಿ ಪಡಿಸಿತ್ತು. ವಿಮಾ ಸಂಸ್ಥೆಯು ತನ್ನ ಸರ್ವೇಕ್ಷಣೆದಾರರ ವರದಿಯ ಆಧಾರದಲ್ಲಿ ಈ ಮೊತ್ತವನ್ನು ನಿಗದಿ ಮಾಡಿತ್ತು. |