ರಾಷ್ಟ್ರವನ್ನೇ ಸಂಚಲನಗೊಳಿಸಿದ್ದ ಬಹುಕೋಟಿ ಹಗರಣದ ಸತ್ಯಂ ಗೋಲ್ಮಾಲ್ ಆರಂಭವಾದುದು ಹತ್ತು ಕೋಟಿರೂಪಾಯಿ ಸರಿದೂಗಿಸಲು ಎಂಬುದಾಗಿ ಹಗರಣದಲ್ಲಿ ಲೆಕ್ಕಪರಿಶೋಧಕರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಐಸಿಎಐ(ಭಾರತೀಯ ಲೆಕ್ಕಪರಿಶೋಧಕರ ಸಂಘ) ಹೇಳಿದೆ.ಸತ್ಯಂನ ಮಾಜಿ ಮುಖ್ಯಹಣಕಾಸು ಅಧಿಕಾರಿ ವಿ.ಶ್ರೀನಿವಾಸ್ ಹಾಗೂ ಪ್ರೈಸ್ ವಾಟರ್ ಹೌಸ್ ಬೆಂಗಳೂರು ಶಾಖೆಯಿಂದ ವಜಾಗೊಂಡಿರುವ ಇಬ್ಬರು ಅಧಿಕಾರಿಗಳ ವಿಚಾರಣೆಯ ಬಳಿಕ ಈ ಮಾಹಿತಿ ಬಹಿರಂಗಗೊಂಡಿದೆ.ಐದಾರು ವರ್ಷಗಳ ಹಿಂದೆ ಕೇವಲ 10 ಕೋಟಿ ರೂಪಾಯಿ ಲೆಕ್ಕ ಸರಿದೂಗಿಸಲು ನೀಡಲಾದ ತಪ್ಪು ಲೆಕ್ಕವು ಬಳಿಕ ಪ್ರತಿ ತ್ರೈಮಾಸಿಕ ವರದಿಯಲ್ಲೂ ಬೆಳೆಯುತ್ತಾ ಹೋಗಿ ಕೊನೆಗೆ ಬೆಟ್ಟದಷ್ಟು ಬೆಳೆದು ಹತೋಟಿಗೆ ನಿಲುಕದಂತಾಯಿತು ಎಂಬುದಾಗಿ ಶ್ರೀನಿವಾಸ್ ವಿಚಾರಣೆ ವೇಳೆಗ ಬಹಿರಂಗ ಪಡಿಸಿರುವುದಾಗಿ ಐಸಿಎಐ ಅಧ್ಯಕ್ಷ ಉತ್ತಮ್ ಪ್ರಕಾಶ್ ಅಗರ್ವಾಲ್ ತಿಳಿಸಿದ್ದಾರೆ.ಸಂಸ್ಥೆಯ ಸಂಸ್ಥಾಪಕ ಬಿ.ರಾಮಲಿಂಗಾ ರಾಜು ಹಾಗೂ ಅವರ ಸಹೋದರ ಬಿ.ರಾಮರಾಜು ಅವರೇ ಈ ತಪ್ಪುಲೆಕ್ಕದ ರೂವಾರಿಗಳು ಎಂದೂ ಅವರು ಹೇಳಿದ್ದಾರೆ. |