ಮನರಂಜನೆ ಪ್ರಾಧಾನ್ಯತೆ ಮತ್ತು ತಾಂತ್ರಿಕ ಕೌಶಲ್ಯ ಸುಧಾರಿಸುವುದರಿಂದ 2010-12ರ ವೇಳೆಗೆ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರಗಳಲ್ಲಿನ ಆದಾಯ ಬಂಡವಾಳ ಹೂಡಿಕೆ ಒಂದು ಲಕ್ಷ ಕೋಟಿಗೆ ಏರಿಕೆಯಾಗಲಿದೆ.
ಪ್ರಸ್ತುತ ರೂ.50ಸಾವಿರ ಕೋಟಿಯಷ್ಟಿರುವ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರವು ಸಾಕಷ್ಟು ವಿಸ್ತಾರಗೊಳ್ಳಲಿದೆ ಎಂದು ಅಸೋಚಾಮ್ ಬಿಡುಗಡೆ ಮಾಡಿರುವ ವರದಿಯಲ್ಲಿ ವಿಶ್ಲೇಷಿಸಿದೆ.
ಟೆಲಿವಿಷನ್ ಉದ್ಯಮದ ವಹಿವಾಟು ಪ್ರಸ್ತುತ ರೂ.20ಸಾವಿರ ಕೋಟಿಗಳಷ್ಟಿದ್ದು, ಮುಂದಿನ ಮೂರು ವರ್ಷಗಳಲ್ಲಿ 52ಸಾವಿರ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದರಲ್ಲಿ ಚಂದಾ ಮೊತ್ತ ಮತ್ತು ಜಾಹೀರಾತು ಮೊತ್ತವು ಒಳಗೊಳ್ಳಲಿದೆ ಎಂದು ಅದು ಹೇಳಿದೆ.
ಕೇಬಲ್ ಟೀವಿಯಿಂದ ಡಿಟಿಎಚ್ಗೆ ಸಾಕಷ್ಟು ಸಂಖ್ಯೆಯಲ್ಲಿ ಬಳಕೆದಾರರು ಪರಿವರ್ತನೆಯಾಗುತ್ತಿದ್ದು, ಚಂದಾ ವಿಭಾಗವು ಸಾಕಷ್ಟು ಪ್ರಮಾಣದಲ್ಲಿ ಆದಾಯವನ್ನು ತರಲಿದೆ. ಸದ್ಯ ದೇಶದಲ್ಲಿ 7.2ಕೋಟಿ ಡಿಟಿಎಚ್ ಚಂದಾದಾರರಿದ್ದು, 2011-12ರ ವೇಳೆಗೆ ಇದರ ಪ್ರಮಾಣ 10ಕೋಟಿಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ. |