ಮೊಬೈಲ್ ಸಂಪರ್ಕ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಭಾರ್ತಿ ಏರ್ಟೆಲ್ ಹಾಗೂ ಮಾಹಿತಿ ತಂತ್ರಜ್ಞಾನದ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋ ಸಂಸ್ಥೆ ಅತ್ಯುತ್ತಮ ತಂತ್ರಜ್ಞಾನ ಹೊಂದಿರುವ ಪ್ರಪಂಚದ ನೂರು ಕಂಪೆನಿಗಳಲ್ಲಿ ಅಮೆರಿಕದ ಬ್ಯುಸಿನೆಸ್ ಮ್ಯಾಗಜೀನ್ನ ಸಮೀಕ್ಷೆಯಲ್ಲಿ ಸ್ಥಾನ ಪಡೆದುಕೊಂಡಿದೆ.
ಇನ್ಫೋಟೆಕ್ 100 ಲಿಸ್ಟ್ ಫಾರ್ 2009 ಎಂಬ ಹೆಸರಿನಲ್ಲಿ ಸಮೀಕ್ಷೆ ನಡೆಸಿದ್ದು, ಅದರಂತೆ ಅತ್ಯುತ್ತಮ ನಿರ್ವಹಣೆ ನಡೆಸಿದ ಪ್ರಪಂಚದ ನೂರು ತಂತ್ರಜ್ಞಾನ ಸಂಸ್ಥೆಗಳಲ್ಲಿ ಭಾರ್ತಿ ಏರ್ಟೆಲ್ ಆರನೇ ಸ್ಥಾನ ಪಡೆದಿದೆ. ಅದರಂತೆ ಮೂರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋ ಪ್ರಮುಖ 50ರೊಳಗಿನ ಸ್ಥಾನ ಪಡೆದಿದೆ.
ಐಟಿ ದೈತ್ಯ ಸಂಸ್ಥೆಯಾಗಿರುವ ಇನ್ಫೋಸಿಸ್ 25ನೇ ಹಾಗೂ ಟಿಸಿಎಸ್ 30, ವಿಪ್ರೋ 43ನೇ ಸ್ಥಾನಗಳನ್ನು ಪಡೆದಿರುವುದಾಗಿ ವರದಿ ತಿಳಿಸಿದೆ.
ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಪ್ರಪಂಚದಾದ್ಯಂತ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ನಿರ್ವಹಣಾ ವೈಖರಿ ಹೇಗಿದೆ ಎಂಬ ಮಾನದಂಡದೊಂದಿಗೆ ಈ ಸಮೀಕ್ಷೆ ನಡೆಸಲಾಗಿದೆ ಎಂದು ಮ್ಯಾಗಜೀನ್ ವಿವರಿಸಿದೆ. ಪ್ರಪಂಚದ ಪ್ರತಿಷ್ಠಿತ ಕಂಪೆನಿಯಾದ ಓರಾಕಲ್ 3ನೇ, ಇನ್ವ್ವೆನ್ಟೆಕ್ 4ನೇ ಹಾಗೂ ಐಬಿಎಂ 5 ನೇ ಸ್ಥಾನ ಪಡೆದಿದೆ. |