ಅನಿಶ್ಚಿತತೆಗಳನ್ನು ನಿವಾರಿಸುವ ಸಲುವಾಗಿ ಕೇಂದ್ರ ಬಜೆಟ್‌ನ್ನು ಸೂಕ್ತ ಸಮಯದಲ್ಲಿ ಮಂಡಿಸುವುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಆಶಯ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಲೇಖಾನುದಾನ ಮಂಡಿಸಲಾಗುವುದೇ ಎಂಬ ಪ್ರಶ್ನೆಯಿಂದ ಅವರು ನುಣುಚಿಕೊಂಡರು. ಭಾರತದ ಆರ್ಥಿಕತೆ ಬಲಿಷ್ಠವಾಗಿದ್ದು, ನಾವು ಬೆಳವಣಿಗೆಯ ಹಳಿ ಮೇಲೆ ಆದಷ್ಟು ಬೇಗ ವಾಪಸು ಬರಬೇಕಾಗಿದೆ. ಆದ್ದರಿಂದ ಅನಿಶ್ಚಿತತೆಗಳನ್ನು ಸೂಕ್ತ ಕಾಲದಲ್ಲಿ ನಿವಾರಿಸುವುದಾಗಿ ಅವರು ಹೇಳಿದರು.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಪ್ರಣವ್ ಮುಖರ್ಜಿ ಅವರನ್ನು ವಿತ್ತಖಾತೆಯಲ್ಲೇ ಉಳಿಸಿದ ಕೆಲವೇ ಸಮಯದಲ್ಲಿ ವರದಿಗಾರರ ಜತೆ ಅವರು ಮಾತನಾಡುತ್ತಿದ್ದರು.ಈ ವರ್ಷಾರಂಭದಲ್ಲಿ ವಿತ್ತಖಾತೆಯ ಅಧಿಕಾರ ವಹಿಸಿಕೊಂಡ ಬಳಿ ಅವರು ಚುನಾವಣೆ ದೃಷ್ಟಿಯಿಂದ ಲೇಖಾನುದಾನ ಮಂಡಿಸಿದ್ದರು. ಈಗ ಸರ್ಕಾರ ಲೇಖಾನುದಾನ ಮಂಡಿಸುವುದೇ ಎಂಬ ಪ್ರಶ್ನೆಗೆ 'ಈಗ ಆ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲವೆಂದು ಹೇಳಿ,ತಮಗೆ ಮತ್ತು ಜನತೆಗೆ ಸಮಸ್ಯೆಗಳನ್ನು ಸೃಷ್ಟಿಸಬೇಡಿ' ಎಂದು ನುಡಿದರು.
ಪ್ರಧಾನಮಂತ್ರಿ ಬಳಿಕ ಪ್ರಮಾಣವಚನ ಸ್ವೀಕರಿಸಿದ ಪ್ರಥಮ ಸಚಿವರಾದ ಮುಖರ್ಜಿ, ತಾವು ಸೋಮವಾರ ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದರು.'ನಾವು ಎಲ್ಲ ಸಮಸ್ಯೆಗಳನ್ನು ನಿಭಾಯಿಸುತ್ತೇವೆ. ಆರ್ಥಿಕ ಹಿಂಜರಿತದ ದುಷ್ಪರಿಣಾಮದಿಂದ ಭಾರತದ ಆರ್ಥಿಕತೆಯನ್ನು ಪಾರುಮಾಡಲು ನಾನಾ ಯತ್ನಗಳನ್ನು ಮಾಡಲಾಗುವುದು' ಎಂದು ಹೇಳಿದರು. |