ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಹೂಡಿಕೆದಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ ಚಿನ್ನದ ದರ ಪ್ರತಿ 10 ಗ್ರಾಂಗೆ 210 ರೂಪಾಯಿಗಳ ಇಳಿಕೆ ಕಂಡು 14,880 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯ ದರ ಕೂಡಾ ಪ್ರತಿ ಕೆಜಿಗೆ 300 ರೂಪಾಯಿಗಳ ಇಳಿಕೆ ಕಂಡು 23 ಸಾವಿರ ರೂಪಾಯಿಗಳಿಗೆ ತಲುಪಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ಗೆ 26 ಡಾಲರ್ ಕುಸಿತ ಕಂಡು 952 ಡಾಲರ್ಗಳಿಗೆ ತಲುಪಿದ ಹಿನ್ನೆಲೆಯಲ್ಲಿ ಚಿನ್ನದ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಸ್ಥಿರವಾದ ಹಿನ್ನೆಲೆಯಲ್ಲಿ ಚಿನ್ನವನ್ನು ಪರ್ಯಾಯ ಹೂಡಿಕೆಯಾಗಿ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣಗಳು ಪ್ರತಿ 10 ಗ್ರಾಂಗೆ 210 ರೂಪಾಯಿಗಳ ಕುಸಿತ ಕಂಡು ಕ್ರಮವಾಗಿ 14,880 ಮತ್ತು 14,730 ರೂಪಾಯಿಗಳಿಗೆ ತಲುಪಿದೆ.
ಚಿನ್ನದ ದರ ಇಳಿಕೆ ಕಂಡಂತೆ ಬೆಳ್ಳಿಯ ದರವೂ ಕೂಡಾ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 300 ರೂಪಾಯಿ ಕುಸಿತ ಕಂಡು 23 ಸಾವಿರ ರೂಪಾಯಿಗಳಿಗೆ ತಲುಪಿದೆ. |