ಪ್ರಯಾಣಿಕರ ಸೌಕರ್ಯ, ಸುರಕ್ಷತೆ ಮತ್ತು ಭಧ್ರತೆಗೆ ಮುಂಬರುವ ಜುಲೈ 1ರಂದು ಮಂಡಿಸಲಿರುವ ರೈಲ್ವೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಕೂಡಾ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ವಾಣಿಜ್ಯ ಮತ್ತು ಪ್ರಯಾಣಿಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆ ಮಾಡಲಾಗುವುದು ಎಂದು ಬ್ಯಾನರ್ಜಿ ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ದೇಶದ ಇತರ ಭಾಗಗಳಿಗಿಂತ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರಾದೇಶಿಕ ರೈಲ್ನೆ ಸಚಿವರಾಗುವ ಸಾಧ್ಯತೆಗಳಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ಯಾನರ್ಜಿ , ನನಗೆ ದೇಶದ ಜನರ ಹಿತಾಸಕ್ತಿ ಮುಖ್ಯ. ಹಾಗೇ ನನ್ನ ರಾಜ್ಯದ ಜನರ ಏಳಿಗೆ ಕೂಡಾ ಅಗತ್ಯವಾಗಿದೆ ಎಂದು ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.14 ನೇ ಲೋಕಸಭೆಯಲ್ಲಿ ಎಡಪಕ್ಷ ಹಾಗೂ ಕಾಂಗ್ರೆಸ್ ಪಕ್ಷದಿಂದ 41 ಮಂದಿ ಸಂಸದರಿದ್ದು, ಬಂಗಾಳವನ್ನು ನಿರ್ಲಕ್ಷಿಸಲಾಗಿದೆ. ನಾನು ದೇಶದ ಜನರ ಹಿತಾಸಕ್ತಿಗೆ ಬದ್ಧವಾಗಿದ್ದೇನೆ. ಆದರೆ ಬಂಗಾಳದಲ್ಲಿ ಹಲವು ಯೋಜನೆಗಳ ಆರಂಭಕ್ಕೆ ನೆರವಾಗುತ್ತೇನೆ ಎಂದು ತಿಳಿಸಿದ್ದಾರೆ. |