ಟುನಿಸಿಯದಲ್ಲಿ ಟೆಲಿಕಾಂ ಪರವಾನಗಿಗೆ ಬಿಡ್ ಸಲ್ಲಿಸುವ ಯೋಜನೆಯನ್ನು ಬಿಎಸ್‌ಎನ್‌ಎಲ್ ಕೈಬಿಟ್ಟಿದ್ದು, ಪರವಾನಗಿಗೆ ಬಿಡ್ ಮಾಡುವ ಮೂಲಕ ಅಲ್ಲಿನ ಮಾರುಕಟ್ಟೆಗೆ ಪ್ರವೇಶಿಸಲು ಬಂಡವಾಳದ ಮೇಲಿನ ಪ್ರತಿಫಲ ತೃಪ್ತಕರವಾಗಿಲ್ಲ ಎಂದು ಹಿರಿಯ ಬಿಎಸ್‌ಎನ್‌ಎಲ್ ಅಧಿಕಾರಿ ತಿಳಿಸಿದರು.
ಇದಕ್ಕೆ ಮುಂಚೆ ಸಿಎಂಡಿ ಕುಲದೀಪ್ ಗೋಯಲ್ ಮಾತನಾಡುತ್ತಾ ವಿಪುಲ ಅವಕಾಶವಿರುವ ಟುನಿಸಿಯದಲ್ಲಿ ಬಿಎಸ್‌ಎನ್‌ಎಲ್ ದೂರಸಂಪರ್ಕ ಬಿಡ್ ಸಲ್ಲಿಸುವ ಬಗ್ಗೆ ಯೋಜಿಸಿದ್ದು, ಆಫ್ರಿಕದ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಲು ನಿರ್ಧರಿಸಿತ್ತೆಂದು ತಿಳಿಸಿದರು.ಟುನಿಸಿಯ ಪರವಾನಗಿಗೆ ಬಿಡ್ ಮಾಡದಿರುವುದು ಆಫ್ರಿಕ ವಲಯದ ಸಾಮರ್ಥ್ಯದ ಬಗ್ಗೆ ಬಿಎಸ್‌ಎನ್‌ಎಲ್ ಕುರುಡಾಗಿದೆಯೆಂದು ಅರ್ಥವಲ್ಲ ಎಂದು ಅಧಿಕಾರಿ ತಿಳಿಸಿದರು.
ಕನಿಷ್ಠ ಬಿಡ್ ದರವು 10 ಮಿಲಿಯ ಅಮೆರಿಕ ಡಾಲರ್ ಎಂದು ತಿಳಿದುಬಂದಿದ್ದು, ಟುನಿಸಿಯ ಮಾರುಕಟ್ಟೆಯು ಶೇ.80 ಮೊಬೈಲ್ ಫೋನ್ ಹೊಂದಿರುವ ಜನಸಂಖ್ಯೆಯನ್ನು ಮುಟ್ಟಬಹುದೇ ಹೊರತು ಮತ್ತಷ್ಟು ಆಳಕ್ಕೆ ಹೋಗಲು ಸಾಧ್ಯವಿಲ್ಲವೆಂದರು. ರಾಷ್ಟ್ರ ಸ್ವಾಮ್ಯದ ಬಿಎಸ್‌ಎನ್ಎಲ್ ಭಾರತೀಯ ಮಾರುಕಟ್ಟೆ ಮೇಲೆ ಇದುವರೆಗೆ ಗಮನಹರಿಸಿದ್ದು, ವಿದೇಶಕ್ಕೂ ವಿಸ್ತರಿಸಲು ನಿರ್ಧರಿಸಿದೆ. ಬಿಎಸ್‌ಎನ್‌ಎಲ್ ಬಳಿ 10 ಬಿಲಿಯ ಡಾಲರ್ ಹೆಚ್ಚುವರಿ ನಗದಿದ್ದು, ಇದರಲ್ಲಿ ಕೆಲವು ಭಾಗ ಸಂಪನ್ಮೂಲವನ್ನು ವಿದೇಶಗಳಲ್ಲಿ ಹೂಡಿಕೆಗೆ ನಿರ್ಧರಿಸಿದೆ. |