ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ ದೇಶದ ಪ್ರಮುಖ ನೂರು ಕಂಪೆನಿಗಳಲ್ಲಿ ಮತ್ತೆ ಸ್ಥಾನಪಡೆದಿದೆ. ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ಎಸಗಿದ ಭಾರಿ ವಂಚನೆಯಿಂದಾಗಿ ಸತ್ಯಂ ಕಂಪೆನಿ ಆ ಸ್ಥಾನಮಾನವನ್ನು ಕಳೆದುಕೊಂಡಿತ್ತು. ಸತ್ಯಂ ಸಂಸ್ಥೆಯ ತ್ರೈಮಾಸಿಕ ಲಾಭಗಳಿಕೆಯಲ್ಲಿ ಏರಿಕೆಯಾಗಿದ್ದರಿಂದ ಶೇರುಪೇಟೆಯಲ್ಲಿ ಶೇರುದರಗಳು ಏರಿಕೆ ಕಂಡಿವೆ.ಸತ್ಯಂ ಮಾರುಕಟ್ಟೆ ಬಂಡವಾಳ 7800 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದರಿಂದ ದೇಶದ 100 ಪ್ರಮುಖ ಕಂಪೆನಿಗಳ ಸಾಲಿನಲ್ಲಿ ಸೇರ್ಪಡೆಯಾಗಿದೆ.ಜನೆವರಿ 7 ರಂದು ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ಹಲವು ವರ್ಷಗಳಿಂದ ಆರ್ಥಿಕ ದಾಖಲೆಗಳನ್ನು ತಿರುಚಿರುವುದಾಗಿ ಒಪ್ಪಿಕೊಂಡ ನಂತರ ಸತ್ಯಂ ಕಂಪೆನಿ ದೇಶದ ಪ್ರತಿಷ್ಠಿತ 100 ಕಂಪೆನಿಗಳ ಸಾಲಿನಿಂದ ಹೊರಬಂದಿತ್ತು. ವಂಚನೆ ಬಹಿರಂಗಗೊಂಡ ಎರಡು ದಿನಗಳ ನಂತರ (ಜ.9ರಂದು) ಸತ್ಯಂ ಕಂಪೆನಿಯ ಶೇರು ದರ ಪ್ರತಿ ಶೇರಿಗೆ 6.30 ರೂಪಾಯಿಗಳಿಗೆ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿ 600 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತ್ತು.ಅದಕ್ಕೆ ತದ್ವಿರುದ್ಧವಾಗಿ ಸತ್ಯಂ ಸಂಸ್ಥಾಪಕ ರಾಜು ಕಟುಂಬ ಸಂಚಾಲಿತ ಎರಡು ಕಂಪೆನಿಗಳ ಸ್ವಾಧೀನಕ್ಕಾಗಿ ವಿಫಲ ಪ್ರಯತ್ನ ನಡೆಸುವ ಕೆಲ ದಿನಗಳ ಹಿಂದೆ ಡಿಸೆಂಬರ್ 16 ರಂದು ಸತ್ಯಂ ಕಂಪೆನಿ ಒಟ್ಟು 15000 ಕೋಟಿ ಮಾರುಕಟ್ಟೆಯ ಬಂಡವಾಳದಿಂದಾಗಿ ದೇಶದ ಪ್ರಮುಖ ಕಂಪೆನಿಗಳಲ್ಲಿ 34ನೇ ಸ್ಥಾನವನ್ನು ಪಡೆದಿತ್ತು. ರಾಮಲಿಂಗಾರಾಜು ವಂಚನೆಯಿಂದ ಹೊರಬಂದಿರುವ ಸತ್ಯಂ ಕಳೆದುಕೊಂಡಿರುವ ಮೌಲ್ಯದಲ್ಲಿ ಅರ್ಧದಷ್ಟು ಮರಳಿ ಪಡೆಯಲು ಶಕ್ತವಾಗಿದ್ದು, ಶೇರು ದರ 6 ರೂಪಾಯಿಗಳಿಂದ 80 ರೂಪಾಯಿಗಳಿಗೆ ಏರಿಕೆ ಕಂಡಿದೆ. |