ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಆರ್ಥಿಕ ನಷ್ಟದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಬೇಲೌಟ್ ಪ್ಯಾಕೇಜ್ ಘೋಷಿಸುವುದು ಅಗತ್ಯವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ. ಏರ್‌ಇಂಡಿಯಾಗೆ ಬೇಲೌಟ್ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಏರ್‌ಇಂಡಿಯಾ ಮಾಲೀಕತ್ವವನ್ನು ಹೊಂದಿರುವ ಕೇಂದ್ರ ಸರಕಾರ, ಖಾಸಗಿ ಕ್ಷೇತ್ರದ ವಿಮಾನಯಾನ ಸಂಸ್ಥೆಗಳಂತೆ ಹೂಡಿಕೆದಾರರು ಹಣವನ್ನು ಶೇರುಪೇಟೆಯಲ್ಲಿ ರಕ್ಷಿಸಲು ಬೇಲೌಟ್ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು. ಕೇಂದ್ರ ಸರಕಾರ 15 ಸಾವಿರ ಕೋಟಿ ರೂಪಾಯಿಗಳ ಬೇಲೌಟ್ ಪ್ಯಾಕೇಜ್ ನೀಡುವ ಸಾಧ್ಯತೆಗಳ ಕುರಿತಂತೆ ಕೇಳಿದಾಗ, ಸಚಿವ ಪ್ರಫುಲ್ ಮಾತನಾಡಿ ಬೇಲೌಟ್ ಪ್ಯಾಕೇಜ್‌ನ ನಿರ್ಧಿಷ್ಟ ಮೊತ್ತದ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದರೆ ಅದು 15 ಸಾವಿರ ಕೋಟಿ ರೂಪಾಯಿಗಳಿಗಿಂತ ತುಂಬಾ ಕಡಿಮೆಯಿದೆ ಎಂದು ತಿಳಿಸಿದ್ದಾರೆ. ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, ಜೂನ್ ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ 30 ಸಾವಿರ ಸಿಬ್ಬಂದಿಗಳ ವೇತನವನ್ನು 15 ದಿನಗಳ ನಂತರ ವಿಳಂಬವಾಗಿ ಪಾವತಿಸಲಿದೆ. |