ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಜುಲೈ 2ರಂದು ಆರಂಭವಾಗಲಿದ್ದು, 2009-10ರ ಸಾಲಿನ ಸಾರ್ವತ್ರಿಕ ಬಜೆಟ್‌ನ್ನು ಜುಲೈ 6 ರಂದು ಮಂಡಿಸಲಾಗುವುದು ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಯ ವೇಳಾಪಟ್ಟಿಯನ್ನು ನಿರ್ಧರಿಸಲಾಯಿತು ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ, ಜುಲೈ 3 ರಂದು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನ ಜುಲೈ 2 ರಿಂದ ಆರಂಭವಾಗಲಿದ್ದು, ಅಗಸ್ಟ್ 7 ರವರೆಗೆ ನಡೆಯಲಿದ್ದು, ಜುಲೈ 31ರೊಳಗೆ ನೂತನ ಬಜೆಟ್‌ಗೆ ಸಂಸತ್ತಿನಿಂದ ಮಂಜೂರಾತಿ ಪಡೆಯುವ ಆಶಾಭಾವನೆಯನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ.
ಯುಪಿಎ ಸರಕಾರ ತನ್ನ ಎರಡನೇ ಅವಧಿಯಲ್ಲಿ ಮೊದಲ ಬಜೆಟ್ ಮಂಡಿಸುತ್ತಿದೆ. ಕಳೆದ ವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿತ್ತ ಸಚಿವಾಲಯಕ್ಕೆ ಪತ್ರ ಬರೆದು,ಜಂಟಿ ಸದನದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನುಡಿದಂತೆ ಸರಕಾರದ ಆದ್ಯತೆಗಳು , ಜನಪರ ಬಜೆಟ್ ಘೋಷಿಸಿದ್ದಂತೆ ವಿತ್ತ ಸಚಿವಾಲಯ ಉತ್ತಮ ಆರ್ಥಿಕ ಬಜೆಟ್ ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಂಸತ್ತಿನ ಜಂಟಿ ಸದನ ಸಭೆಯನ್ನು ಉದ್ದೇಶಿಸಿ ಮಾತನಾಡಿ ,ಯುಪಿಎ ಸರಕಾರದ ಪ್ರಮುಖ ಉದ್ದೇಶಗಳಾದ ಬಿಪಿಎಲ್ ಕುಟುಂಬಗಳಿಗೆ 3 ರೂಪಾಯಿ ಕೆಜಿ ಅಕ್ಕಿ ಅಥವಾ ಗೋಧಿ , ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಮೂಲಸೌಕರ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲು ಸರಕಾರ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದ್ದರು. |