ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕಾಗಿ ಭಾರತ ಎಲ್ಲ ಪ್ರಯತ್ನಗಳನ್ನು ಮಾಡಲು ಸಿದ್ಧವಿದೆ ಎಂದು ಪ್ರಧಾನಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮನಮೋಹನ್ ಸಿಂಗ್, ರಷ್ಯಾಗೆ ತೆರಳುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಜಾಗತಿಕ ಆರ್ಥಿಕ ಕುಸಿತ ತಡೆಗೆ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಬೆಂಬಲ ನೀಡಲು ಭಾರತ ಸದಾ ಸಿದ್ಧವಿದೆ ಎಂದು ರಷ್ಯಾ ದೇಶಕ್ಕೆ ಮೂರು ದಿನಗಳ ಕಾಲ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ , ಬ್ರೆಜಿಲ್ -ರಷ್ಯಾ -ಇಂಡಿಯಾ -ಚೀನಾ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಜೇಶನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬ್ರಿಕ್ ಗುಂಪಿಗೆ ಜಾಗತಿಕ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂದು ಅಭಿಪ್ರಾಯಪಟ್ಟರು. ರಷ್ಯಾದ ನಗರವಾದ ಯೆಕಟೆರಿನ್‌ಬರ್ಗ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ನಂತರ ಪ್ರಥಮ ಬಾರಿಗೆ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರನ್ನು ಭೇಟಿ ಮಾಡಲಿದ್ದಾರೆ. |