ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ನಿರಂತರವಾಗಿ ಏರಿಕೆ ಕಾಣುತ್ತಿರುವುದು ಸರಕಾರಕ್ಕೆ ಕಳವಳ ಮೂಡಿಸಿದ್ದು, ತೈಲ ದರ ಏರಿಕೆ ಸೇರಿದಂತೆ ವಿವಿಧ ರೀತಿಯ ಚಿಂತನೆ ನಡೆಸಿದೆ ಎಂದು ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ನಿರಂತರವಾಗಿ ಏರಿಕೆಯಿಂದಾಗಿ ಗಂಭೀರ ಕಳವಳ ಮೂಡಿಸಿದೆ ಎಂದು ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿಯವರೊಂದಿಗೆ ಚರ್ಚಿಸಿದ ನಂತರ ದಿಯೋರಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ದರ ಏರಿಕೆಯನ್ನು ನಿಭಾಯಿಸಲು ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡಿ ನಷ್ಟವನ್ನು ಸರಿತೂಗಿಸಲು ತೈಲ ಬಾಂಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ದಿಯೋರಾ ತಿಳಿಸಿದ್ದಾರೆ.ಶೀಘ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆಯಾಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಈ ಕುರಿತು ನಾನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ನುಡಿದರು. |